Featured, ಇತರೆ, ಸ್ಥಳೀಯ

ತೆರೆದ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ : ಗುರುಪುರ–ಕೈಕಂಬದಲ್ಲಿ ಇಂದಿನಿಂದ ಸಾರ್ವಜನಿಕ ಪ್ರತಿಭಟನೆ

ಗುರುಪುರ–ಕೈಕಂಬ, ಫೆ.16: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕೈಕಂಬ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ತಡೆಗೋಡೆ ಮಾದರಿಯ ಮೇಲ್ಸೇತುವೆ ಬದಲಾಗಿ, ಪಿಲ್ಲರ್‌ಗಳ ಮೇಲೆ ಆಧಾರಿತ ತೆರೆದ ಮಾದರಿಯ ಮೇಲ್ಸೇತುವೆಯನ್ನು ಕೈಕಂಬ ಮಾರ್ಕೆಟ್ ವರೆಗೆ ವಿಸ್ತರಿಸಿ ನಿರ್ಮಿಸಬೇಕೆಂದು ಆಗ್ರಹಿಸಿ ಕೈಕಂಬ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೈಕಂಬ ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿ ಆರಂಭಿಸಲಾಯಿತು.

ಸಮಿತಿ ಪ್ರಕಟಣೆಯ ಪ್ರಕಾರ, ಈ ಧರಣಿ ಫೆಬ್ರವರಿ 19ರವರೆಗೆ ನಿರಂತರವಾಗಿ ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟ ಭರವಸೆ ಅಥವಾ ತೃಪ್ತಿಕರ ಪ್ರತಿಕ್ರಿಯೆ ಲಭಿಸದಿದ್ದಲ್ಲಿ ಫೆಬ್ರವರಿ 20ರಂದು ಬೃಹತ್ ಸಾರ್ವಜನಿಕ ಹಕ್ಕೊತ್ತಾಯ ಸಭೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಸ್ಥಳೀಯರ ಅಭಿಪ್ರಾಯದಂತೆ, ಪಿಲ್ಲರ್‌ಗಳ ಆಧಾರಿತ ತೆರೆದ ಮೇಲ್ಸೇತುವೆ ನಿರ್ಮಾಣವಾಗದಿದ್ದರೆ ವ್ಯಾಪಾರ ಚಟುವಟಿಕೆಗಳಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಶಾಲೆ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಸಂಚಾರದ ತೊಂದರೆ ಉಂಟಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವ್ಯಾಪಾರಸ್ಥರು ಮತ್ತು ನಾಗರಿಕರು ಅಭಿವೃದ್ಧಿ ಕಾಮಗಾರಿ ಜನಸೌಕರ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಕೈಕಂಬ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷೆ ಶ್ರೀಮತಿ ವಿಜಯ ಜೆ. ಸುವರ್ಣ ನೇತೃತ್ವ ವಹಿಸಿದ್ದರು. ಪ್ರಮುಖರಾದ ಸುರೇಶ್ ಬೆಳ್ಚಡ ಅಡ್ಡೂರು, ಅಶ್ರಫ್ ಅಡ್ಡೂರು, ಹರೀಶ್ ಮಟ್ಟಿ, ಗಣೇಶ್ ಶೆಟ್ಟಿಗಾರ್, ಶಾಹಿಕ್ ಅಡ್ಡೂರು, ಅಬ್ದುರಹ್ಮನ್ ಅಡ್ಡೂರು (ಪಂಚಾಯತ್ ಸದಸ್ಯ), ರೋಷನ್‌ಡಿ ಕುನ್ಹ, ಜುಲಿಯೇಟ್ ಸೇರವೋ, ವಾಲ್ಟರ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಜೈಸನ್ ಪಾರಿಸ್, ಅನ್ಸಾರ್ ಪೊಳಲಿ, ಅಝ್ಮಲ್ ಕೈಕಂಬ ಹಾಗೂ ಗುರುಪುರ ಪಂಚಾಯತ್ ಸದಸ್ಯ ಏ.ಕೆ. ರಿಯಾಝ್ ಅಡ್ಡೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ

 

Related Posts