ಸುಳ್ಯ, ಫೆ.17: ಎಂ.ಕೆ. ಫೈಝಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಫೈಝಿ ಅವರನ್ನು ಕಳೆದ ವರ್ಷ ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶ ನೀಡಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ವೃತ್ತದ ಬಳಿ ಎಸ್ಡಿಪಿಐ ಕಾರ್ಯಕರ್ತರು ಜಮಾಯಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಿರಝ್ ಸುಳ್ಯ, ಸಮಿತಿ ಸದಸ್ಯ ರಶೀದ್ ಗೂನಡ್ಕ, ಜಿಲ್ಲಾ ನಾಯಕ ಅಬ್ದುಲ್ ಕಲಾಂ, ಸುಳ್ಯ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಸಿ.ಎ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬ್ಲಾಕ್ ಕಾರ್ಯದರ್ಶಿ ಸುಹೈಲ್ ಸ್ವಾಗತಿಸಿದರು. ಬ್ಲಾಕ್ ಸಮಿತಿ ಸದಸ್ಯ ಅಝೀಝ್ ಸಂಗಂ ವಂದಿಸಿದರು.


