ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆ.

ಬಂಟ್ವಾಳ, ಮಾರ್ಚ್ 29: ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು, ಅದು ಕೇವಲ ಪುಸ್ತಕಗಳಲ್ಲೇ ಸೀಮಿತವಾಗದೆ ಜನಪದ ಹಾಗೂ ಯಕ್ಷಗಾನದ ಮೂಲಕ ಜನಜೀವನದೊಳಗೆ ಬೆರೆತು ಬೆಳೆಯುತ್ತಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು.
ಬಂಟ್ವಾಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ “ಸಾಹಿತ್ಯದ ಸ್ಥಿತ್ಯಂತರಗಳು” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ನವೋದಯ ಚಳವಳಿಯಿಂದ ಪ್ರಾರಂಭಗೊಂಡ ಸಾಹಿತ್ಯವು ನಂತರ ಸಾಮಾಜಿಕ ಚಿಂತನೆ, ಮಹಿಳಾ ಧ್ವನಿ ಹಾಗೂ ಯುವ ಲೇಖಕರ ಅಭಿವ್ಯಕ್ತಿಗಳ ಮೂಲಕ ಹೊಸ ರೂಪಗಳನ್ನು ಪಡೆದುಕೊಂಡಿದೆ ಎಂದು ಅವರು ವಿವರಿಸಿದರು. ರತ್ನಾಕರ ವರ್ಣಿ, ಮುದ್ದಣ, ಗೋವಿಂದ ಪೈ, ಪಂಜೆ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕಡೆಂಗೊಡ್ಲು, ಕೊಳಂಬೆ ಪುಟ್ಟಣ್ಣ ಗೌಡ ಮೊದಲಾದ ಅವಿಭಜಿತ ದಕ್ಷಿಣ ಕನ್ನಡದ ಸಾಹಿತ್ಯ ದಿಗ್ಗಜರು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸಂಚಲನ ಮೂಡಿಸಿದ್ದಾರೆ ಎಂದರು.
ಪ್ರಾಚೀನ ಸಾಹಿತ್ಯಕ್ಕೂ ಮುನ್ನ ಪಾಡ್ದನ, ನೇಜಿ ಹಾಡು, ಶೋಭಾನೆ, ಅಜ್ಜಿಕಥೆಗಳು ಜನಪದ ಸಾಹಿತ್ಯದ ಭಾಗವಾಗಿ ಬೆಳವಣಿಗೆ ಕಂಡಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಹಿತ್ಯದ ಅಭಿವೃದ್ದಿಗಾಗಿ ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸುವುದು ಅಗತ್ಯ ಎಂದು ಅವರು ತಿಳಿಸಿದರು.
“ಸಂಸ್ಕೃತಿಯ ಪಲ್ಲಟಗಳು” ಎಂಬ ವಿಷಯದ ಮೇಲೆ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗುಳಿ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಚಿದಂಬರ ಬೈಕಂಪಾಡಿ, ದ.ಕ. ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಯದುಪತಿ ಗೌಡ ಉಪಸ್ಥಿತರಿದ್ದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.





m
