ಅಬ್ದುಲ್ ರವೂಫ್, ರಿಜ್ವಾನ್ ರಿಝು ಹಾಗೂ ವೈಷ್ಣವ್ ಅವರ ಕ್ರೀಡಾ ಸೇವೆ: ಸುಳ್ಯದಲ್ಲಿ ಅರಳುತ್ತಿದೆ ಫುಟ್ಬಾಲ್ ಪ್ರತಿಭೆ!
ಇಂದಿನ ವೇಗದ ಯುಗದಲ್ಲಿ ಮಾತಿಗೂ ಬೆಲೆ ನಿಗದಿಯಾಗಿರುವ ಕಾಲಘಟ್ಟದಲ್ಲಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜದ ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿಕೊಡುವ ಹೃದಯಗಳು ವಿರಳ. ಅಂತಹ ಅಪರೂಪದ ಕ್ರೀಡಾ ಮನೋಭಾವದ ಸ್ಪೂರ್ತಿಗೆ ಸುಳ್ಯ ಸಾಕ್ಷಿಯಾಗಿದೆ

ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಆಕರ್ಷಣೆ ಹಾಗೂ ಜನಪ್ರಿಯತೆ ಹೊಂದಿರುವ ಕ್ರೀಡೆ ಎಂದರೆ ಫುಟ್ಬಾಲ್. ಆ ಫುಟ್ಬಾಲ್ ಆಟಕ್ಕೂ ಸುಳ್ಯಕ್ಕೂ ಇರುವ ನಂಟು ಇಂದು ನಿನ್ನೆಯದ್ದಲ್ಲ—ಅದು ಹಲವು ದಶಕಗಳ ಇತಿಹಾಸವನ್ನು ಹೊತ್ತಿರುವ ಅವಿರತ ಸಂಬಂಧ.
ಸುಳ್ಯ ಫುಟ್ಬಾಲ್ ಕ್ಲಬ್ (SFC) ವತಿಯಿಂದ ಅಬ್ದುಲ್ ರವೂಫ್, ರಿಜ್ವಾನ್ ರಿಝು ಹಾಗೂ ವೈಷ್ಣವ್ ಅವರ ಮುಂದಾಳತ್ವದಲ್ಲಿ ನಗರದ ಆಸುಪಾಸಿನ 10 ರಿಂದ 17 ವರ್ಷದ ಸುಮಾರು 55 ಯುವಕ, ಮತ್ತು ಬಾಲಕರಿಗಾಗಿ ನಡೆಯುತ್ತಿರುವ ಉಚಿತ ಫುಟ್ಬಾಲ್ ತರಬೇತಿ ಶಿಬಿರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿದಿನ ಬೆವರಿನ ಹನಿಗಳನ್ನು ಸಾಧನೆಯ ಮುತ್ತುಗಳನ್ನಾಗಿಸುವ ಈ ಯುವಕರು, ಕ್ರೀಡೆ ಎಂದರೆ ಕೇವಲ ಗೆಲುವಿನ ಹಾದಿಯಲ್ಲ; ಅದು ಶಿಸ್ತು, ಸಾಮರಸ್ಯ, ಆತ್ಮವಿಶ್ವಾಸ ಮತ್ತು ಬದುಕಿನ ಮೌಲ್ಯಗಳನ್ನು ಕಲಿಸುವ ಜೀವನಪಾಠ ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾರುತ್ತಿದ್ದಾರೆ.
ಇಂದಿನ ದಿನಮಾನದಲ್ಲಿ ಕ್ರೀಡೆಯೂ ವ್ಯಾಪಾರೀಕರಣದ ನೆರಳಿಗೆ ಸಿಲುಕುತ್ತಿರುವ ಸಂದರ್ಭದಲ್ಲಿ, ಕಠಿಣ ಸ್ವರೂಪದ ಫುಟ್ಬಾಲ್ ತರಬೇತಿಯನ್ನು ಆಸಕ್ತ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಿರುವ ಈ ಮೂವರು ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಪ್ರತಿಭೆ ಹಣದ ಅಳತೆಯಲ್ಲಿ ಅಳೆಯಬಾರದು, ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು ಎಂಬ ಮಹತ್ವದ ಸಂದೇಶವನ್ನು ಅವರು ಸಮಾಜಕ್ಕೆ ನೀಡುತ್ತಿದ್ದಾರೆ.

ಒಂದೆಡೆ ಸಾರ್ವಜನಿಕರ ಆಸ್ತಿಯಾಗಿರುವ ಕ್ರೀಡಾಂಗಣಗಳ ನಿರ್ವಹಣೆ ಮತ್ತು ಪೋಷಣೆ ಹೆಸರಿನಲ್ಲಿ ವಿಧಿಸಲಾಗುತ್ತಿರುವ ದುಬಾರಿ ಶುಲ್ಕ ಬಡ ಹಾಗೂ ಮಧ್ಯಮ ವರ್ಗದ ಉದಯೋನ್ಮುಖ ಕ್ರೀಡಾಪಟುಗಳ ಕನಸುಗಳಿಗೆ ಅಡ್ಡಿಯಾಗುತ್ತಿರುವುದು ನೋವಿನ ಸಂಗತಿ. ಆದರೆ ಇಂತಹ ಸನ್ನಿವೇಶದಲ್ಲೇ, “ಕ್ರೀಡೆ ಎಲ್ಲರ ಹಕ್ಕು” ಎಂಬ ಮನೋಭಾವದೊಂದಿಗೆ ಮುಂದೆ ಬಂದಿರುವ ಈ ಮೂವರು ಯುವಕರ ಸೇವಾ ಸಂಕಲ್ಪ ಕ್ರೀಡಾ ಪ್ರಪಂಚಕ್ಕೆ ಪ್ರೇರಣೆಯ ಬೆಳಕಾಗಿದೆ.
“ಮೈದಾನದಲ್ಲಿ ಬೆವರು ಸುರಿಸಿದ ಯುವಕರು, ನಾಳೆಯ ಸಮಾಜಕ್ಕೆ ಸ್ಪೂರ್ತಿಯ ಬೆಳಕು ಹರಡುತ್ತಾರೆ” ಎಂಬ ಮಾತಿನಂತೆ, ಅಬ್ದುಲ್ ರವೂಫ್, ರಿಜ್ವಾನ್ ರಿಝು ಹಾಗೂ ವೈಷ್ಣವ್ ಅವರ ಈ ಕ್ರೀಡಾ ಸೇವೆ ಸುಳ್ಯದ ಹೆಮ್ಮೆ ಮಾತ್ರವಲ್ಲ, ಯುವಜನತೆಗೆ ಮಾದರಿಯ ಸಂದೇಶವೂ ಹೌದು. ಇವರ ಹೃದಯಪೂರ್ವಕ ಕ್ರೀಡಾ ಮನೋಭಾವಕ್ಕೆ ಸುಳ್ಯ ಜನತೆ ಗೌರವದ ಸಲ್ಯೂಟ್ ಸಲ್ಲಿಸುತ್ತಿದೆ.

ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದೇ ನಮ್ಮ ಅಚಲ ಉದ್ದೇಶ” – ಆಯೋಜಕರ ಮಾತು
ಬಹಳ ಕಷ್ಟಸಾಧ್ಯವಾದ ಈ ಕಾರ್ಯವನ್ನು ಕೈಗೆತ್ತಿಕೊಂಡಿರುವ ಮೂವರು ಯುವಕರ ಉದ್ದೇಶ ಒಂದೇ — ಸುಳ್ಯ ತಾಲೂಕಿನಲ್ಲಿ ಬೆಳೆಯುತ್ತಿರುವ ಫುಟ್ಬಾಲ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು.
“ನಾವು ಸಹ ಫುಟ್ಬಾಲ್ ಆಟಗಾರರಾಗಿದ್ದೆವು. ನಮ್ಮ ಕಾಲದಲ್ಲಿ ನಮ್ಮನ್ನು ಪ್ರೋತ್ಸಾಹಿಸುವವರು ಅಲ್ಪ ಪ್ರಮಾಣದಲ್ಲೇ ಇದ್ದರು. ಬಾಯಿಮಾತಿನ ಪ್ರೋತ್ಸಾಹ ದೊರೆಯುತ್ತಿತ್ತಾದರೂ, ಅದು ನಮ್ಮನ್ನು ಮುಂದಿನ ಹಂತಕ್ಕೆ ಬೆಳೆಸಲು ಸಾಕಾಗುತ್ತಿರಲಿಲ್ಲ. ಆ ಕೊರತೆಯ ಅನುಭವವೇ ಇಂದು ನಮಗೆ ಪ್ರೇರಣೆಯಾಗಿದೆ,” ಎಂದು ಆಯೋಜಕರು ತಿಳಿಸಿದ್ದಾರೆ.
ಇಂದು ಸುಳ್ಯ ತಾಲೂಕಿನಲ್ಲಿ ಫುಟ್ಬಾಲ್ ಕ್ರೀಡೆ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗಗಳಲ್ಲಿಯೂ ಸಾಕಷ್ಟು ಪ್ರತಿಭಾನ್ವಿತ ಫುಟ್ಬಾಲ್ ಆಟಗಾರರು ಬೆಳೆಯುತ್ತಿದ್ದಾರೆ. ಅಲ್ಲದೆ 10 ರಿಂದ 12 ವರ್ಷದೊಳಗಿನ ಅನೇಕ ಬಾಲಕರಲ್ಲೂ ಫುಟ್ಬಾಲ್ ಬಗ್ಗೆ ವಿಶೇಷ ಆಸಕ್ತಿ ಮತ್ತು ಅಭಿರುಚಿ ಕಾಣಿಸುತ್ತಿದೆ.
ಇಂತಹ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಉತ್ತಮ ತರಬೇತಿ ಮತ್ತು ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಒದಗಿಸುವುದೇ ನಮ್ಮ ಅಚಲ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
“ಫುಟ್ಬಾಲ್ ಕಠಿಣ ಪರಿಶ್ರಮ ಮತ್ತು ಶಿಸ್ತನ್ನು ಬೇಡುವ ಕ್ರೀಡೆ. ಅದಕ್ಕೆ ತರಬೇತಿ ನೀಡುವುದೂ ಅಷ್ಟೇ ಸವಾಲಿನ ಕೆಲಸ. ದೊಡ್ಡ ನಗರಗಳಲ್ಲಿ ಇಂತಹ ತರಬೇತಿ ಶಿಬಿರಗಳನ್ನು ಶುಲ್ಕ ಪಡೆದು ನಡೆಸಲಾಗುತ್ತದೆ. ನಮಗೂ ಹಲವು ಖರ್ಚುಗಳಿವೆ. ಆದರೂ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಶುಲ್ಕ ವಿಧಿಸದೇ ಉಚಿತವಾಗಿ ತರಬೇತಿ ನೀಡುತ್ತಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.
“ಈ ಕಾರ್ಯ ನಿರಂತರವಾಗಿ ಸಾಗಬೇಕಾದರೆ ಸಮಾಜದ ಸಹಕಾರ ಅತ್ಯಗತ್ಯ. ದಾನಿಗಳು ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಮತ್ತು ನೆರವು ದೊರೆತರೆ ಇನ್ನಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ,” ಎಂದು ಆಯೋಜಕರು ಆಶಯ ವ್ಯಕ್ತಪಡಿಸಿದ್ದಾರೆ.

ಸುಳ್ಯ ಮತ್ತು ಫುಟ್ಬಾಲ್: ತಲೆಮಾರುಗಳ ಅವಿರತ ಬಾಂಧವ್ಯದ ಹೆಮ್ಮೆಯ ಗಾಥೆ
ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಆಕರ್ಷಣೆ ಹಾಗೂ ಜನಪ್ರಿಯತೆ ಹೊಂದಿರುವ ಕ್ರೀಡೆ ಎಂದರೆ ಫುಟ್ಬಾಲ್. ಆ ಫುಟ್ಬಾಲ್ ಆಟಕ್ಕೂ ಸುಳ್ಯಕ್ಕೂ ಇರುವ ನಂಟು ಇಂದು ನಿನ್ನೆಯದ್ದಲ್ಲ—ಅದು ಹಲವು ದಶಕಗಳ ಇತಿಹಾಸವನ್ನು ಹೊತ್ತಿರುವ ಅವಿರತ ಸಂಬಂಧ.
ಜಿಲ್ಲೆಯಲ್ಲಿ ಮಂಗಳೂರಿನ ನಂತರ ಫುಟ್ಬಾಲ್‌ಗಾಗಿ ಹೆಸರುವಾಸಿಯಾದ ಊರುಗಳಲ್ಲಿ ಸುಳ್ಯವೂ ಒಂದು. ಅದಕ್ಕೂ ತನ್ನದೇ ಆದ ಬಲವಾದ ಕಾರಣಗಳಿವೆ. ಸುಮಾರು ಅರವತ್ತು ವರ್ಷಗಳ ಹಿಂದೆಯೇ ಸುಳ್ಯದ ಗಾಂಧಿನಗರ ಶಾಲಾ ಮೈದಾನದಲ್ಲಿ ಫುಟ್ಬಾಲ್ ಆಟಗಳು ಮತ್ತು ಪಂದ್ಯಾಟಗಳು ನಿಯಮಿತವಾಗಿ ನಡೆಯುತ್ತಿದ್ದವು. ಆಗಲೇ ಈ ಆಟದ ಮೇಲಿನ ಆಸಕ್ತಿ ಸುಳ್ಯದ ಯುವಕರಲ್ಲಿ ಗಟ್ಟಿಯಾಗಿ ಬೇರೂರಿತ್ತು.
ಆ ಕಾಲದಲ್ಲಿ ಸುಳ್ಯದ ಫುಟ್ಬಾಲ್ ದಂತಕಥೆ ಎಂದೇ ಕರೆಯಲ್ಪಡುವ ಡಿಲಕ್ಸ್ ಮಮುಚ್ಚ ಅವರ ನೇತೃತ್ವದಲ್ಲಿ ಬಲಿಷ್ಠ ತಂಡವೊಂದು ರೂಪುಗೊಂಡಿತ್ತು. Mohammedan Sporting Club ಸದಸ್ಯರಾಗಿ ಫುಟ್ಬಾಲ್ ಆಡಿದ ಅನುಭವ ಹೊಂದಿದ್ದ ಅವರು, ತಮ್ಮ ಕ್ರೀಡಾ ಜ್ಞಾನ ಮತ್ತು ಅನುಭವವನ್ನು ಸುಳ್ಯದ ಯುವಕರಿಗೆ ಹಂಚಿಕೊಡುತ್ತಿದ್ದರು. ಯುವಕರಿಗೆ ತರಬೇತಿ ನೀಡಿ ಹೊಸ ಪ್ರತಿಭಾವಂತರನ್ನು ಬೆಳೆಸುವಲ್ಲಿ ಅವರ ಪಾತ್ರ ಮಹತ್ತರವಾಗಿತ್ತು.

ಸುಳ್ಯದ ತಂಡವು ಮಂಗಳೂರು, ಉಡುಪಿ, ಮಡಿಕೇರಿ ಸೇರಿದಂತೆ ಹಲವೆಡೆ ನಡೆದ ಫುಟ್ಬಾಲ್ ಪಂದ್ಯಾಟಗಳಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಆ ದಿನಗಳಲ್ಲಿ ಸುಳ್ಯದ ಫುಟ್ಬಾಲ್ ತಂಡ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು.
ನಂತರದ ಕೆಲವು ವರ್ಷಗಳಲ್ಲಿ ಫುಟ್ಬಾಲ್ ಚಟುವಟಿಕೆ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡು ಮೈದಾನ ಕೆಲಕಾಲ ನಿಶ್ಶಬ್ದವಾಗಿತ್ತು. ಆದರೆ ಕ್ರೀಡೆಯ ಮೇಲಿನ ಪ್ರೀತಿ ಸುಳ್ಯದಲ್ಲಿ ಎಂದಿಗೂ ಕಡಿಮೆಯಾಗಲಿಲ್ಲ. ಬಳಿಕ ಶರೀಫ್ ಕಂಠಿ, ಇಕ್ಬಾಲ್ ಜೈಬಾರತ್ ಹಾಗೂ ಮುನಾಫರ್ ಅವರ ನೇತೃತ್ವದಲ್ಲಿ ಸುಳ್ಯದ ಗಾಂಧಿನಗರ ಮೈದಾನ ಮತ್ತೆ ಫುಟ್ಬಾಲ್ ಸಂಭ್ರಮದಿಂದ ಕಂಗೊಳಿಸಿತು.
ಹೀಗೆ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಿರುವ ಸುಳ್ಯ ಮತ್ತು ಫುಟ್ಬಾಲ್‌ನ ಈ ಬಾಂಧವ್ಯ ಕೇವಲ ಆಟಕ್ಕೆ ಸೀಮಿತವಾದದ್ದಲ್ಲ; ಅದು ಊರಿನ ಕ್ರೀಡಾ ಸಂಸ್ಕೃತಿ, ಯುವಜನರ ಉತ್ಸಾಹ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ಸುಳ್ಯದ ನೆಲದಲ್ಲಿ ಉಳಿಯುವ ಫುಟ್ಬಾಲ್ ಇಂದು ಕೂಡ ಅದೇ ಚೈತನ್ಯ, ಅದೇ ಕನಸು ಮತ್ತು ಅದೇ ಹೆಮ್ಮೆಯನ್ನು ಜೀವಂತವಾಗಿಟ್ಟಿದೆ.






m
