ಸಂಪಾಜೆ, ಮೇ 28: ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ ಈದುಲ್ ಅಝ್‌ಹಾ (ಬಕ್ರೀದ್) ಹಬ್ಬವನ್ನು ಸಂಪಾಜೆಯ ಪೇರಡ್ಕ–ಗೂನಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗುರುವಾರ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿಯ ಗೌರವಾನ್ವಿತ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬಳಿಕ ಈದ್ ಸಂದೇಶ ನೀಡಿದ ಅವರು, ಪ್ರವಾದಿ ಇಬ್ರಾಹೀಂ (ಅ) ಅವರ ನಿಷ್ಕಲ್ಮಶ ತ್ಯಾಗ ಹಾಗೂ ಸರ್ವಶಕ್ತನ ಮೇಲಿನ ಅಚಲ ನಂಬಿಕೆಯನ್ನು ಸ್ಮರಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ಸಹನೆ ಹಾಗೂ ಪರಸ್ಪರ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ನೈಜ ಮಾನವೀಯತೆಯನ್ನು ಮೆರೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷರಾದ ಜನಾಬ್ ಟಿ.ಎಂ. ಶಾಹೀದ್ ತೆಕ್ಕಿಲ್ ಉಪಸ್ಥಿತರಿದ್ದು, ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ನಮಾಝ್ ಬಳಿಕ ನೂರಾರು ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಸ್ತಲಾಘವ ಮಾಡುವ ಮೂಲಕ ‘ಈದ್ ಮುಬಾರಕ್’ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಖಬರಸ್ಥಾನ ಹಾಗೂ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹಿರಿಯರ ನೆನಪು, ನಾಡಿನ ಒಳಿತು, ಸಮೃದ್ಧಿ ಹಾಗೂ ವಿಶ್ವಶಾಂತಿಗಾಗಿ ಸಾಮೂಹಿಕ ದುಆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಅಲ್‌ಬಿರ್ ಶಾಲೆಯ ಅಧ್ಯಕ್ಷರಾದ ಪಿ.ಕೆ. ಉಮ್ಮರ್ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಎಂಆರ್‌ಡಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಜಮಾಅತ್ ಸದಸ್ಯರು ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.





m
