Featured, ಇತರೆ, ಸ್ಥಳೀಯ

ಕಾಸರಗೋಡು : ಅಡೂರಿನಲ್ಲಿ ಆವರಣ ಗೋಡೆ ಕುಸಿದು ಇಬ್ಬರು ಸಹೋದರರು ಮೃತ್ಯು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ

ಕಾಸರಗೋಡು, ಜೂನ್ 6: ಕಾಸರಗೋಡು ಜಿಲ್ಲೆಯ ಆಡೂರು ಸಮೀಪದ ಸಂಚಕ್ಕಡವಿನಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ ಇಬ್ಬರು ಸಹೋದರರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ಮೃತರನ್ನು ಅಬೂಬಕರ್ ಅವರ ಪುತ್ರರಾದ ಮುಜಮ್ಮಿಲ್ (14) ಹಾಗೂ ಮುನ್ಸೀರ್ (10) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ವಿಶೇಷ್ ಎಂಬ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸಂಜೆ ಸುಮಾರು 5.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ರಜಾದಿನದ ಹಿನ್ನೆಲೆಯಲ್ಲಿ ಮೂವರು ಮಕ್ಕಳು ವಿಶೇಷ್ ಅವರ ಮನೆಯ ಸಮೀಪ ಸಣ್ಣ ವ್ಯಾಪಾರ ನಡೆಸುತ್ತಿದ್ದರು. ಈ ವೇಳೆ ಮನೆಯ ಸಮೀಪದ ಗೋಡೆ ಏಕಾಏಕಿ ಕುಸಿದು ಮಕ್ಕಳ ಮೇಲೆಯೇ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ರಕ್ಷಣಾ ಕಾರ್ಯಕರ್ತರು ಮೂವರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಮುಜಮ್ಮಿಲ್ ಮತ್ತು ಮುನ್ಸೀರ್ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಗಾಯಗೊಂಡ ವಿಶೇಷ್ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮಕ್ಕಳು ಹತ್ತಿರದ ಬಸ್ ನಿಲ್ದಾಣದ ಬಳಿ ಇದ್ದ ಸಂದರ್ಭದಲ್ಲಿ ಗೋಡೆ ಕುಸಿದಿದ್ದು, ಅದರ ಪರಿಣಾಮ ಬಸ್ ನಿಲ್ದಾಣದ ಒಂದು ಭಾಗವೂ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯೇ ಈ ದುರಂತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
m

Related Posts