Featured, ಇತರೆ, ಸ್ಥಳೀಯ

ಮಂಗಳೂರಿನಲ್ಲಿ 42.7 ಕೆ.ಜಿ. ತೂಕದ ಎರಡು ಆನೆದಂತಗಳೊಂದಿಗೆ ಮೂವರು ಆರೋಪಿಗಳ ಬಂಧನ

ಸಿಐಡಿ ಅರಣ್ಯ ಘಟಕದ ದಾಳಿ; ಎರಡು ಕಾರುಗಳು ವಶಕ್ಕೆ

ಮಂಗಳೂರು, ಜೂ. 12: ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ-ಮರೋಳಿ ಸಮೀಪ ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಐಡಿ ಅರಣ್ಯ ಘಟಕದ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೊರೆತ ಮಾಹಿತಿಯಂತೆ ಸಂಜೆ ಸುಮಾರು 3.30 ಗಂಟೆಗೆ ಮರೋಳಿ ಪ್ರದೇಶಕ್ಕೆ ತೆರಳಿದ ಅಧಿಕಾರಿಗಳು ಆರೋಪಿಗಳು ಎರಡು ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದನ್ನು ದೃಢಪಡಿಸಿಕೊಂಡರು. ಬಳಿಕ ತಕ್ಷಣ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಎರಡು ಕಾರುಗಳು ಹಾಗೂ ಆನೆದಂತಗಳನ್ನು ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಒಟ್ಟು 42.700 ಕೆ.ಜಿ. ತೂಕದ ಎರಡು ಆನೆದಂತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಶಶಾಂಕ (ಪುದುವೆಟ್ಟು, ಬೆಳ್ತಂಗಡಿ), ಖಾದರ್ ಅಲಿಯಾಸ್ ಅಬ್ದುಲ್ ಖಾದರ್ (ಮಂಜೇಶ್ವರ ತಾಲೂಕು, ಕಾಸರಗೋಡು) ಹಾಗೂ ಪ್ರಭಾಚಂದ್ರ (ಅತ್ತಾವರ, ಜೆಪ್ಪು, ಮಂಗಳೂರು) ಎಂದು ಗುರುತಿಸಲಾಗಿದೆ.

ಈ ಕಾರ್ಯಾಚರಣೆಯು ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪಮಹಾನಿರೀಕ್ಷಕರು, ಬೆಂಗಳೂರು ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ದಿಲೀಪ್ ಜಿ.ಆರ್. ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಯರಾಮ ಕೆ.ಟಿ., ಬಾಲಕೃಷ್ಣ ಕೆ.ಎಂ., ತಾರನಾಥ ಎಸ್. ಹಾಗೂ ಅಬ್ದುಲ್ ರವೂಫ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

m

Related Posts