ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಅಂತಿಮ ಬಿ.ಎ. ಪದವಿ ಆರನೇ ಸೆಮಿಸ್ಟರ್ ವಿದ್ಯಾರ್ಥಿನಿ ಫಾತಿಮತ್ ಮೈಸೀನ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಸಂಶೋಧನಾ ಸಾಧನೆ ದಾಖಲಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ತಮ್ಮ ಪ್ರಾಜೆಕ್ಟ್ ಕಾರ್ಯದ ಅಂಗವಾಗಿ ಅವರು “A Case Study on Economic Analysis of Shakthi Scheme – Government Free Bus Scheme at Sullia Taluk of Dakshina Kannada District, Karnataka” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿ ಯಶಸ್ವಿಯಾಗಿ ಮಂಡಿಸಿದ್ದಾರೆ. ಈ ಸಂಶೋಧನಾ ಕಾರ್ಯವು ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯ ಆರ್ಥಿಕ ಪರಿಣಾಮಗಳು ಹಾಗೂ ಸಾರ್ವಜನಿಕರ ಮೇಲೆ ಅದರ ಪ್ರಭಾವವನ್ನು ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದೆ.
ಈ ಸಂಶೋಧನಾ ಪ್ರಬಂಧವನ್ನು ನೆಹರು ಮೆಮೋರಿಯಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮಿ ಎನ್. ಎಸ್. ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದ್ದು, ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಯಾದ International Journal of Current Science (IJCSPUB) ನಲ್ಲಿ ಪ್ರಕಟವಾಗಿರುವುದು ವಿಶೇಷ ಸಾಧನೆಯಾಗಿದೆ.
ಫಾತಿಮತ್ ಮೈಸೀನ ಅವರು ಪೇರಡ್ಕ-ಗೂನಡ್ಕ ಕದ ನಿವಾಸಿಗಳಾದ ಅಬ್ದುಲ್ ರಝಾಕ್ ಟಿ.ಎ. ಹಾಗೂ ಆಯಿಷಾ ದಂಪತಿಯ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಶೈಕ್ಷಣಿಕ ಹಾಗೂ ಸಂಶೋಧನಾ ಸಾಧನೆಯು ಕಾಲೇಜು, ಪೋಷಕರು ಹಾಗೂ ಊರಿನ ಜನತೆಗೆ ಹೆಮ್ಮೆ ತಂದಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಿದೆ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ವೃಂದ, ಸಹಪಾಠಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.





m
