ಸುಳ್ಯ: ಅಪರೂಪದ SMA ಕಾಯಿಲೆಯಿಂದ ಬಳಲುತ್ತಿರುವ ಕೇರಳದ ಮೂವರು ಪುಟ್ಟ ಮಕ್ಕಳ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.), ಜಟ್ಟಿಪಳ್ಳ ವತಿಯಿಂದ ಶುಕ್ರವಾರ ವಿಶೇಷ ಧನಸಂಗ್ರಹ ಅಭಿಯಾನ ನಡೆಸಲಾಯಿತು.

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕಲ್ಲೂರುಟ್ಟಿಯ ಅರುಣ್ ಮತ್ತು ಶಾಲಿನಿ ದಂಪತಿಯ ಮಕ್ಕಳಾದ ಏಥನ್, ಒಲಿವರ್ ಮತ್ತು ಡೇವಿಡ್ ಅಪರೂಪದ SMA ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಪುಟ್ಟ ಮಕ್ಕಳ ಜೀವ ಉಳಿಸುವ ಮಾನವೀಯ ಉದ್ದೇಶದಿಂದ ಗ್ರೀನ್ ಬಾಯ್ಸ್ ತಂಡವು ಧನಸಂಗ್ರಹ ಅಭಿಯಾನಕ್ಕೆ ಮುಂದಾಗಿದೆ.

ನ.27ರಂದು ಶುಕ್ರವಾರದ ಜುಮಾ ನಮಾಝ್ ಬಳಿಕ ಸುಳ್ಯ ತಾಲೂಕಿನ ವಿವಿಧ ಮಸೀದಿಗಳಿಗೆ ಭೇಟಿ ನೀಡಿದ ಸಂಘಟನೆಯ ಕಾರ್ಯಕರ್ತರು ಬಕೆಟ್ಗಳು ಹಾಗೂ QR ಕೋಡ್ ಮೂಲಕ ಧನಸಂಗ್ರಹ ನಡೆಸಿದರು. ನಮಾಝ್ಗೆ ಆಗಮಿಸಿದ್ದ ಮುಸ್ಲಿಂ ಬಾಂಧವರಲ್ಲಿ ಮಕ್ಕಳ ಚಿಕಿತ್ಸೆಯ ಗಂಭೀರತೆ ಮತ್ತು ನೆರವಿನ ಅಗತ್ಯವನ್ನು ವಿವರಿಸಿ ಸಹಕಾರ ಕೋರಿದರು.

ಕೋಯಿನಾಡು, ಸಂಪಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು, ಪರಾಜೆ, ಅರಂಬೂರು, ಸುಳ್ಯ ಕೇಂದ್ರ ಜುಮಾ ಮಸೀದಿ, ಮೊಗರ್ಪಣೆ ಜುಮಾ ಮಸೀದಿ, ಹನಫೀ ಜುಮಾ ಮಸೀದಿ, ಜಾಲ್ಸೂರು ಜುಮಾ ಮಸೀದಿ ಹಾಗೂ ಪೈಚಾರ್ ಜುಮಾ ಮಸೀದಿಗಳಲ್ಲಿ ಅಭಿಯಾನ ನಡೆಯಿತು.
ವಿವಿಧ ಮಸೀದಿಗಳ ಆಡಳಿತ ಸಮಿತಿಗಳು, ಧಾರ್ಮಿಕ ಮುಖಂಡರು ಹಾಗೂ ನಮಾಜಿಗರು ಕಾರ್ಯಕರ್ತರ ಮನವಿಗೆ ಸ್ಪಂದಿಸಿ ತಮ್ಮ ಕೈಲಾದ ನೆರವು ನೀಡಿದರು. ಬಕೆಟ್ಗಳಲ್ಲಿ ನಗದು ದೇಣಿಗೆ ನೀಡುವುದರ ಜೊತೆಗೆ QR ಕೋಡ್ ಮೂಲಕವೂ ಹಲವರು ಸಹಾಯ ಹಸ್ತ ಚಾಚಿದರು.

ಮೂರು ಪುಟ್ಟ ಮಕ್ಕಳ ಬದುಕುಳಿಸುವ ಉದ್ದೇಶದಿಂದ ಧರ್ಮ, ಜಾತಿ ಭೇದ ಮರೆತು ಮಾನವೀಯ ನೆಲೆಯಲ್ಲಿ ನಡೆದ ಈ ಧನಸಂಗ್ರಹ ಅಭಿಯಾನ ಸಾರ್ವಜನಿಕರ ಗಮನ ಸೆಳೆಯಿತು.
ಧ್ವನಿವರ್ಧಕ ಬಳಸಿ ವ್ಯಾಪಕ ಪ್ರಚಾರ ನಡೆಸಲು ಅನುಮತಿ ದೊರೆಯದಿದ್ದರೂ ಕಾರ್ಯಕರ್ತರು ಹಿಂಜರಿಯದೆ, ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಮಸೀದಿಗಳ ಮೂಲಕ ಧನಸಂಗ್ರಹ ನಡೆಸಿರುವುದು ಸಂಘಟನೆಯ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.
ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇನ್ನಷ್ಟು ವ್ಯಾಪಕವಾಗಿ ಧನಸಂಗ್ರಹ ಅಭಿಯಾನ ನಡೆಸುವ ಉದ್ದೇಶವನ್ನು ಸಂಘಟನೆ ಹೊಂದಿದ್ದು, ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಮತ್ತು ಸಹಕಾರ ದೊರೆಯುವ ನಿರೀಕ್ಷೆಯಲ್ಲಿದೆ.
ಮೂರು ಪುಟ್ಟ ಜೀವಗಳ ಬದುಕಿಗೆ ಹೊಸ ಭರವಸೆ ಮೂಡಿಸುವ ಈ ಅಭಿಯಾನಕ್ಕೆ ಇನ್ನಷ್ಟು ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದು ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.), ಜಟ್ಟಿಪಳ್ಳ ಮನವಿ ಮಾಡಿದೆ.
ಶುಕ್ರವಾರ 12 ಮಸೀದಿಗಳಿಂದ ಒಟ್ಟು 32,395 ಸಂಗ್ರಹವಾಗಿರುವುದಾಗಿ ಸಂಘಟನೆಯ ಅಧ್ಯಕ್ಷ ಶಿಹಾಬ್ ಸಿ.ಎ ಮಾಹಿತಿ ನೀಡಿದ್ದಾರೆ.