Featured, ಕ್ರೀಡೆ, ರಾಷ್ಟ್ರೀಯ

MI VS RCB 2025 | ಕೃನಾಲ್ ಪಾಂಡ್ಯ ದಾಳಿಗೆ ಮುಂಬೈ ತತ್ತರ: ಆರ್‌ಸಿಬಿಗೆ ರೋಮಾಂಚನಕಾರಿ ಜಯ

MI VS RCB 2025 | ಕೃನಾಲ್ ಪಾಂಡ್ಯ ದಾಳಿಗೆ ಮುಂಬೈ ತತ್ತರ: ಆರ್‌ಸಿಬಿಗೆ ರೋಮಾಂಚನಕಾರಿ ಜಯ

ಪ್ರಸಕ್ತ ಸಾಲಿನ ಐಪಿಎಲ್ ಋತುವಿನ 20ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ.

ಮುಂಬೈ ಇಲ್ಲಿನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಮತ್ತು ಫಿಲಿಪ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದರು.

ಮುಂಬೈ ಪರ ಬೌಲ್ಟ್ ಎಸೆದ ಪಂದ್ಯದ ಮೊದಲ ಎಸೆತದಲ್ಲಿ ಫಿಲಿಪ್ ಸಾಲ್ಟ್ ಬೌಂಡರಿ ಬಾರಿಸಿದರು, ಆದರೆ ಮುಂದಿನ ಎಸೆತದಲ್ಲಿ ಬೌಲ್ಟ್ ಬೌಲ್ಡ್ ಆಗುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ತಂದಿಟ್ಟರು.

ನಂತರ ದೇವದತ್ ಪಡಿಕಲ್ ಕೊಹ್ಲಿ ಜೊತೆಗೂಡಿ 91 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ವಿಗ್ನೇಶ್ ಪುತ್ತೂರು ಎಸೆದ ದಾಳಿಗೆ ದೇವದತ್ ಪಡಿಕಲ್ ವಿಕೆಟ್ ಒಪ್ಪಿಸಿದರು, ಬೃಹತ್ ಹೊಡೆತಕ್ಕೆ ಮುನ್ನುಗುವಾಗ ಪಡಿಕಲ್ ಔಟಾದರು. ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಒಳಗೊಂಡಂತೆ 22 ಎಸೆತಗಳಲ್ಲಿ 37 ರನ್ ಗಳಿಸಿದ್ದರು.

ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದು 42 ಎಸೆತಗಳಲ್ಲಿ 67 ರನ್ ಗಳಿಸಿದರು. ಇದರಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. 15ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೊಹ್ಲಿ ವಿಕೆಟ್ ಪಡೆದರು. ಅದೇ ಓವರ್‌ನಲ್ಲಿ ಅವರು ಲಿವಿಂಗ್‌ಸ್ಟನ್ ಅವರ ವಿಕೆಟ್ ಅನ್ನು ಸಹ ಪಡೆದರು.

ಆರ್‌ಸಿಬಿ ನಾಯಕ ರಜತ್ ಪಟಿದಾರ್ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇನ್ನೊಂದು ತುದಿಯಲ್ಲಿ ಜಿತೇಶ್ ಶರ್ಮಾ ಅದ್ಭುತವಾಗಿ ಆಡಿದರು. ರಜತ್ ಪಟಿದಾರ್ 32 ಎಸೆತಗಳಲ್ಲಿ 64 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಬೌಲ್ಟ್ ಎಸೆದ ಚೆಂಡನ್ನು ರಜತ್ ಪಾಟಿದಾರ್ ದೊಡ್ಡ ಹೊಡೆತಕ್ಕೆ ಮುಂದಾದಾಗ ಮುಂಬೈ ವಿಕೆಟ್ ಕೀಪರ್ ರಿಕಲ್ಟನ್ ಅದ್ಭುತ ಕ್ಯಾಚ್ ಹಿಡಿದರು. ಜಿತೇಶ್ 18 ಎಸೆತಗಳಲ್ಲಿ 40 ರನ್ ಗಳಿಸಿದರು.

ಹೀಗಾಗಿ, ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 221 ರನ್ ಗಳಿಸಿತು.

ಗೆಲ್ಲಲು 222 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ತಲಾ 17 ರನ್‌ಗಳಿಗೆ ಔಟಾದರು.

ಮುಂದೆ ಬಂದ ವಿಲ್ ಜಾಕ್ಸ್ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ 22 ರನ್ ಗಳಿಸಿ ಔಟಾದರು. ಬಹುನಿರೀಕ್ಷಿತ ಸೂರ್ಯಕುಮಾರ್ ಯಾದವ್ 28 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಂತರ ಬಂದ ತಿಲಕ್ ವರ್ಮಾ 29 ಎಸೆತಗಳಲ್ಲಿ 56 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು, ನಾಯಕ ಹಾರ್ದಿಕ್ ಪಾಂಡ್ಯ 42, ನಮನ್ ದಿರ್ 11 ಮತ್ತು ಮಿಚೆಲ್ ಸ್ಯಾಂಟ್ನರ್ 8 ರನ್ ಗಳಿಸಿದರು. ಆರ್‌ಸಿಬಿ ಪರ ಕೃನಾಲ್ ಪಾಂಡ್ಯ 4 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರು.

ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13,000+ ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದರು.

m

Related Posts