ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ಠಾಣಾಧಿಕಾರಿಯನ್ನು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿ, ಉನ್ನತ ಮಟ್ಟದ ತನಿಖೆಗೆ : ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯ
ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ವಾಮಂಜೂರ್ ಪ್ರದೇಶದಲ್ಲಿ ದಿನಾಂಕ ಇಪ್ಪತ್ತೇಳರಂದು ವಲಸೆ ಕಾರ್ಮಿಕನ ಮೇಲೆ ಸುಮಾರು ಮೂವತ್ತಕ್ಕೂ ಹೆಚ್ಚು ಕೋಮುವಾದಿ ಕೊಲೆಗಡುಕರು ಗುಂಪು ಸೇರಿ ಕ್ರೂರ ರೀತಿಯಲ್ಲಿ ಭೀಬತ್ಸವಾಗಿ ಹಲ್ಲೆ ನಡೆಸಿ ಕೊಲೆಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ,ಅನ್ಯ ರಾಜ್ಯದಿಂದ ಹೊಟ್ಟೆಪಾಡಿಗಾಗಿ ಬಂದು ಕೆಲಸ ಮಾಡುವ ಕೂಲಿ ಕಾರ್ಮಿಕನನ್ನು ಗುಂಪು ಸೇರಿ ಹಲ್ಲೆ ಮಾಡಿ ಕೊಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವುದು ಅತ್ಯಂತ ನೋವಿನ ಮತ್ತು ದುಃಖದ ವಿಚಾರ. ಗುಂಪು ಸೇರಿ ಹೊಡೆದು ಕೊಂದು ಒಬ್ಬ ವ್ಯಕ್ತಿ ಸಾವೀಗೀಡದ ಘಟನಾ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಮೈತುಂಬ ಗಾಯವಿದ್ದ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನ ಬರದೇ ಇದ್ದದ್ದು ಕೊಲೆ ಕೇಸು ದಾಖಲಿಸುವ ಬದಲು ಅನುಮಾನಾಸ್ಪದ ಸಾವು ಎಂದು ಉಲ್ಲೇಖಿಸಿ ಪ್ರಥಮ ವರ್ತಮಾನ ವರದಿ ದಾಖಲಿಸಿರುವುದು ಸ್ಥಳೀಯ ಪೊಲೀಸ್ ಅಧಿಕಾರಿ ವೈಫಲ್ಯ ಮತ್ತು ಮೂವತ್ತಕ್ಕೂ ಹೆಚ್ಚು ಮಂದಿ ಸೇರಿ ಹಲ್ಲೆ ಮಾಡಿ ಒಬ್ಬ ವ್ಯಕ್ತಿ ಸಾವೀಗೀಡಾದ ವಿಷಯ ತಿಳಿಯಲು ವಿಫಲರಾದ ಸ್ಥಳೀಯ ಗುಪ್ತಚರ ಇಲಾಖೆ ಬಗ್ಗೆ ಮತ್ತು ಅತೀ ಸೂಕ್ಷ ಪ್ರದೇಶದಲ್ಲಿ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇದ್ದದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗಳ್ಳಬೇಕು ಇಡೀ ಪ್ರಕರಣವನ್ನು ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸಲು ಸರಕಾರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಟಿ ಎಂ ಶಾಹಿದ್ ತೆಕ್ಕಿಲ್ ಸರಕಾರಕ್ಕೆ ಆಗ್ರಹಿಸಿದ್ದಾರೆ, ಕಾರ್ಮಿಕನ ಕುಟುಂಬಕ್ಕೆ ಐವತ್ತು ಲಕ್ಷ ರೂ ಪರಿಹಾರ ತಕ್ಷಣ ನೀಡುವಂತೆ ವಿನಂತಿಸಿದ್ದಾರೆ, ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಲು ಉತ್ತಮ ಅಧಿಕಾರಿಗಳನ್ನು ಮತ್ತು ಜಿಲ್ಲೆಯ ಕೋಮು ಭಾವನೆಗಳನ್ನು ಕೆರಳಿಸುವ ಸಂಘಟನೆಗಳ ಮತ್ತು ವ್ಯಕ್ತಿಗಳ ಪತ್ತೆ ಹಚ್ಚುವ ಗುಪ್ತಚರ ಪೊಲೀಸ್ ಅಧಿಕಾರಿಗಳನ್ನು ಸಿಬ್ಬಂದಿಗಳನ್ನು ನೇಮಕ ಮಾಡದೇ ಇದ್ದಲ್ಲಿ ಮುಂದೆ ಜಿಲ್ಲೆಗೆ ದೊಡ್ಡ ಅನಾಹುತ ಸಂಭವಿಸಲಿದೆ ಎಂದು ಎಚ್ಚರಿಸಿದರು. ಈ ಬಗ್ಗೆ ಎಲ್ಲಾ ಸಮುದಾಯದ ಸಹಕಾರ ಪಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಶಾಹಿದ್ ಮನವಿ ಮಾಡಿದ್ದಾರೆ.




m

