Featured, ಇತರೆ, ಸ್ಥಳೀಯ

ಮಹಾರಾಷ್ಟ್ರದ ಶಿರೋಡಾ ಬೀಚ್‌ನಲ್ಲಿ ದಾರುಣ ಘಟನೆ – ಖಾನಾಪೂರದ ಒಂದೇ ಕುಟುಂಬದ 7 ಮಂದಿ ಅಲೆಗಳಿಗೆ ಬಲಿ

ಬೆಳಗಾವಿ : ಮಹಾರಾಷ್ಟ್ರದ ಶಿರೋಡಾ ಬೀಚ್‌ನಲ್ಲಿ ನಡೆದ ಹೃದಯವಿದ್ರಾವಕ ದುರಂತದಲ್ಲಿ ಖಾನಾಪೂರ ತಾಲೂಕಿನ ಲೋಂಡಾದ ಒಂದೇ ಕುಟುಂಬದ ಏಳು ಮಂದಿ ಅಲೆಗಳಿಗೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಇರ್ಫಾನ್ (37), ಫರೀನ್ (34), ಇಬಾದ (13), ಇಕ್ವಾನ್ (15), ಧಾರವಾಡ ಮೂಲದ ಅತ್ತಾರ (16), ಮಹಾರಾಷ್ಟ್ರದ ಫರಾನ್ (34) ಮತ್ತು ಜಾಕೀರ್ (13) ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ಪರಸ್ಪರ ಸಂಬಂಧಿಕರು ಎಂದು ತಿಳಿದುಬಂದಿದೆ.

ಇದೇ ವೇಳೆ ಇಜನಾ ಕಿತ್ತೂರು (10), ಇಮ್ರಾನ್ (42), ಜಬೀನ್ (38) ಮತ್ತು ಸೇಫ್ ಇಸ್ರಾ (16) ಅಪಾಯದಿಂದ ಪಾರಾಗಿದ್ದಾರೆ.

ಮಾಹಿತಿಯ ಪ್ರಕಾರ, ಸುಮಾರು 11 ಮಂದಿ ಸೇರಿ ಎರಡು ದಿನಗಳ ಹಿಂದೆ ಪ್ರವಾಸದ ಉದ್ದೇಶದಿಂದ ಶಿರೋಡಾ ಬೀಚ್‌ಗೆ ತೆರಳಿದ್ದರು. ಆದರೆ ಸಮುದ್ರದ ಅಲೆಗಳಲ್ಲಿ ಈಜಾಡುತ್ತಿದ್ದ ವೇಳೆ ಅಕಸ್ಮಾತ್ ಬಲವಾದ ಅಲೆಗಳು ಎದ್ದಿದ್ದು, ಕೆಲವರು ಅದರ ಸೆಳೆತಕ್ಕೆ ಸಿಲುಕಿ ನೀರಲ್ಲಿ ಮುಳುಗಿದ್ದಾರೆ.

ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದು, ಈಗಾಗಲೇ ಐವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಉಳಿದ ಇಬ್ಬರ ಶೋಧ ಕಾರ್ಯ ಸ್ಥಳೀಯ ಪೊಲೀಸರು ಹಾಗೂ ದುರಂತ ನಿರ್ವಹಣಾ ತಂಡದವರಿಂದ ಮುಂದುವರಿದಿದೆ.

ಈ ದುರ್ಘಟನೆಯಿಂದ ಲೋಂಡಾ ಗ್ರಾಮದಲ್ಲಿ ಆಘಾತದ ಛಾಯೆ ಎದ್ದಿದ್ದು, ಗ್ರಾಮದಾದ್ಯಂತ ದುಃಖದ ವಾತಾವರಣ ಆವರಿಸಿದೆ.

m

Related Posts