ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (114) ಇನ್ನಿಲ್ಲ. ನವೆಂಬರ್ 2ರಿಂದ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟ ಸಮಸ್ಯೆಯಿಂದ ಮಂಗಳವಾರ ನಿಧನರಾದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು ಆಗಿರುವ ತಿಮ್ಮಕ್ಕ, ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರೊಂದಿಗೆ ದಾಂಪತ್ಯ ಜೀವನ ನಡೆಸಿ ಮಕ್ಕಳಿಲ್ಲದ ನೋವನ್ನು ಮರೆಯಲು ಮರ ನೆಡುವ ಸೇವೆಯನ್ನು ಆರಿಸಿಕೊಂಡಿದ್ದರು. ರಾಜ್ಯ ಹೆದ್ದಾರಿ–99ರಲ್ಲಿ ಕುದೂರು–ಹುಲಿಕಲ್ ಮಾರ್ಗದ ನಡುವೆ ಅವರು ನೆಟ್ಟ ನೂರಾರು ಆಲದ ಮರಗಳು ಇಂದು ಹೆಮ್ಮರವಾಗಿ ನಿಂತಿವೆ. ಮಕ್ಕಳಂತೆ ನೋಡಿಕೊಂಡ ಆ ಮರಗಳೇ ಅವರ ಜೀವನದ ಗುರುತುಗಳಾಗಿ ಉಳಿದಿವೆ.

