Featured, ಇತರೆ, ಸ್ಥಳೀಯ

ಕಡಬದಲ್ಲಿ ಸಂವಿಧಾನ ದಿನಾಚರಣೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಪ್ರಜಾಧ್ವನಿ ಕರ್ನಾಟಕ ಹಾಗೂ ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ “ಸಂವಿಧಾನದ ಆಶಯಗಳು, ಮೌಲ್ಯಗಳು, ಜಾಗೃತಿ ಮತ್ತು ಯುವಕರ ಪಾತ್ರ” ವಿಷಯದ ಕುರಿತ ಸಂವಾದ ಕಾರ್ಯಕ್ರಮವು ಡಿಸೆಂಬರ್ 01ರಂದು ಕಡಬದ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ಡ್ಯಾನಿ ದಿನೇಶ್ ಸ್ವಾಗತಿಸಿದರು. ಜೋಮೋನ್ ಅಕಾಡೆಮಿಯ ಮುಖ್ಯಸ್ಥ ಜೋಮೋನ್ ಕಡಬ ಸಂವಿಧಾನ ಪೀಠಿಕೆಯ ಪ್ರಮಾಣ ಬೋಧಿಸಿದರು.
ಪ್ರಜಾಧ್ವನಿ ಕರ್ನಾಟಕದ ಸಂಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಜಾನಿ ಕೆ.ಪಿ. ಪ್ರಸ್ತಾವಿಕವಾಗಿ ಮಾತನಾಡಿ, ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವು ಮುಂದಿನ ತಲೆಮಾರುಗಳ ಭದ್ರ ಭವಿಷ್ಯಕ್ಕೆ ಅಡಿಪಾಯವಾಗಿದೆ. ಅದನ್ನು ಸಂರಕ್ಷಿಸಿ ಬೆಳೆಸುವ ಉದ್ದೇಶದಿಂದಲೇ ಪ್ರಜಾಧ್ವನಿ ಕರ್ನಾಟಕ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂವಾದದ ಮುಖ್ಯ ಅತಿಥಿಗಳಾದ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆ್ಯಂಟನಿ ಟಿ.ಪಿ. ಮಾತನಾಡಿ ಸಂವಿಧಾನದ ಮಹತ್ವ, ಹಕ್ಕು–ಕರ್ತವ್ಯಗಳು, ಜವಾಬ್ದಾರಿಗಳ ಕುರಿತು ವಿವರಿಸಿದರು. ಹಕ್ಕುಗಳ ರಕ್ಷಣೆಗೆ ಮೊದಲು ಕರ್ತವ್ಯಗಳ ಪಾಲನೆ ಅಗತ್ಯವೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ‘V for IAS Notes’ ಅಪ್ಲಿಕೇಶನ್ ಸಂಸ್ಥಾಪಕ ಮಹಮ್ಮದ್ ಮುಸ್ತಫಾ ಮಾತನಾಡಿ, ವೈವಿಧ್ಯತೆಯಿಂದ ಕೂಡಿದ ಭಾರತವನ್ನು ಏಕತೆಯ ಸೂತ್ರದಲ್ಲಿ ಕಟ್ಟುವ ಮಹಾ ಶಕ್ತಿ ಭಾರತದ ಸಂವಿಧಾನ. ಅದನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಅಶೋಕ್ ಎಡಮಲೆ ಮಾತನಾಡಿ, ನಮ್ಮ ದಿನನಿತ್ಯದ ಪ್ರತಿಯೊಂದು ಚಟುವಟಿಕೆಗೂ ಸಂವಿಧಾನ ಆಧಾರವಾಗಿದೆ. ಸಂವಿಧಾನದ ಆಶಯಗಳನ್ನು ರಕ್ಷಿಸುವಲ್ಲಿ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ. ಪ್ರಕಾಶ್ ಪೌಲ್ ಡಿಸೋಜ ಮಾತನಾಡಿ, ಸಮಾಜವನ್ನು ಸಾಂವಿಧಾನಿಕ ದಾರಿಯಲ್ಲಿ ನಡೆಸುವ ಪ್ರಯತ್ನವೇ ಪ್ರಜಾಧ್ವನಿ ಎಂದು ಹೇಳಿದರು. ಸಂವಿಧಾನದ ಆಶಯಗಳ ಈಡೇರಿಕೆಯಲ್ಲಿ ಎಲ್ಲರ ಶ್ರಮ ಅಗತ್ಯ ಎಂದು ಹೇಳಿದರು. ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ಪ್ರತಿನಿಧಿ ವಿದ್ಯಾರ್ಥಿನಿ ಕು. ಸಾನಿಕ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಿರಣಕುಮಾರ, ವಿದ್ಯಾರ್ಥಿ ನಾಯಕ–ನಾಯಕಿ, ಪ್ರಜಾಧ್ವನಿ ಕರ್ನಾಟಕದ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಹಿರಿಯ ಸದಸ್ಯ ಮೊಹಮ್ಮದ್ ಕುಂಞಿ ಗೂನಡ್ಕ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಮಹಮ್ಮದ್ ಸವಾದ್ ವಂದಿಸಿದರು. ಕಾರ್ಯಕ್ರಮವನ್ನು ಪ್ರಜಾಧ್ವನಿಯ ಪದಾಧಿಕಾರಿ ಲುಕಾಸ್ ಟಿ.ಐ. ನಿರೂಪಿಸಿದರು. ಭರತ್ ಕುಕ್ಕುಜಡ್ಕ, ಅಶ್ರಫ್ ಸಾಹುಕಾರ್, ಮಹೇಶ್ ಬೆಳ್ಳಾರಕರ್ ಸಹಕರಿಸಿದರು

Related Posts