Featured, ಅಂತರಾಜ್ಯ, ಅಂತರಾಷ್ಟ್ರೀಯ, ಇತರೆ, ಸ್ಥಳೀಯ

ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ: ಮೂರನೇ ದಿನವೂ ಪ್ರಯಾಣಿಕರ ಪರದಾಟ

ಒಂದೇ ದಿನ 550 ವಿಮಾನಗಳು ರದ್ದು – ಬೆಂಗಳೂರು ವಿಮಾನ ನಿಲ್ದಾಣದಲ್ಲೇ 205 ಹಾರಾಟ ಸ್ಥಗಿತ.!!

ಬೆಂಗಳೂರು, ಡಿಸೆಂಬರ್ 5:
ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸತತ ಮೂರನೇ ದಿನವೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಗುರುವಾರ ಒಂದೇ ದಿನ ದೇಶದಾದ್ಯಂತ ಸುಮಾರು 550 ವಿಮಾನಗಳ ಹಾರಾಟ ರದ್ದಾಗಿದೆ. ಸಿಬ್ಬಂದಿಯ ತೀವ್ರ ಕೊರತೆಯಿಂದಾಗಿ ಇಂಡಿಗೋ ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರವೇ 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದ್ದು, ಅನೇಕ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲೇ ಅಲೆದಾಡುವಂತಾಯಿತು. ಕಳೆದ ಮೂರು ದಿನಗಳಿಂದ ಸಮಸ್ಯೆ ಮುಂದುವರಿದಿರುವುದರಿಂದ ಪ್ರಯಾಣಿಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಚಂಡೀಗಢದಲ್ಲಿ ಕನ್ನಡಿಗರ ಪರದಾಟ.!!

ಇಂಡಿಗೋ ವಿಮಾನಗಳ ವಿಳಂಬದಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸುಮಾರು 20 ಮಂದಿ ಕನ್ನಡಿಗರು ಬೆಂಗಳೂರಿಗೆ ಮರಳಲಾಗದೇ ಸಂಕಷ್ಟಕ್ಕೆ ಸಿಲುಕಿದರು. ಕೆಲವರು ಗಂಟೆಗಳ ಕಾಲ ಕಾಯುತ್ತಾ ಕುಳಿತಿರುವ ದೃಶ್ಯಗಳು ಕಂಡುಬಂದಿವೆ.

ವಿಮಾನದೊಳಗೆ ಪ್ರಯಾಣಿಕರು ಲಾಕ್ – ಆಕ್ರೋಶದ ಸಿಡಿಮಿಡಿ

ಕೆಲವು ಸ್ಥಳಗಳಲ್ಲಿ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿಕೊಂಡು ನಂತರ ದೀರ್ಘ ಕಾಲ ವಿಳಂಬ ಮಾಡಿದ ಘಟನೆಗಳೂ ನಡೆದಿದೆ. ವಿಮಾನದೊಳಗೆಲೇ ಸಿಲುಕಿದ್ದ ಪ್ರಯಾಣಿಕರು ಇಂಡಿಗೋ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸುಳ್ಳು ಮಾಹಿತಿ ನೀಡಿ ನಮ್ಮ ಅಮೂಲ್ಯ ಸಮಯ ಹಾಳು ಮಾಡುತ್ತಿದ್ದಾರೆ” ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಮತ್ತೊಂದೆಡೆ, ತಮ್ಮ ವಿಮಾನ ರದ್ದಾದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿಲ್ಲ ಎಂದು ಮಹಿಳಾ ಪ್ರಯಾಣಿಕರೊಬ್ಬರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶಾದ್ಯಂತ ಪ್ರತಿಭಟನೆ.!!

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನ ರದ್ದಾದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಲಖನೌನಲ್ಲಿ ಘೋಷಣೆ ಕೂಗಲಾಯಿತು. ಪುಣೆ, ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಇಂಡಿಗೋ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ವಿಮಾನ ರದ್ದಾಗಲು ಕಾರಣವೇನು?

ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತವಾಗಲು ಮುಖ್ಯ ಕಾರಣವಾಗಿ ಪೈಲಟ್‌ಗಳ ಹಾಗೂ ಕ್ಯಾಬಿನ್ ಸಿಬ್ಬಂದಿಯ ತೀವ್ರ ಕೊರತೆ ಇರಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಕಾರ್ಯಾಚರಣೆಯ ಸವಾಲುಗಳು ಹಾಗೂ ಕೆಲವು ವಿಮಾನ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಪ್ರತಿಕೂಲ ಹವಾಮಾನವೂ ವಿಳಂಬಕ್ಕೆ ಕಾರಣವಾಗಿದೆ.

ದಿಢೀರ್ ಪೈಲಟ್ ಕೊರತೆಗೆ ಹೊಸ ನಿಯಮಗಳೇ ಕಾರಣ

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ನವೆಂಬರ್ 1 ರಂದು ಪೈಲಟ್‌ಗಳ ಕರ್ತವ್ಯ ಸಮಯ ಮಿತಿಗೆ ಸಂಬಂಧಿಸಿದ ಪರಿಷ್ಕೃತ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ: ಪೈಲಟ್ ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯಸಮಯ ನೀಡುವುದು ಕಡ್ಡಾಯ ರಾತ್ರಿಯ ಕಾರ್ಯಾಚರಣೆಗಳ ಮಿತಿ ರಾತ್ರಿ ಲ್ಯಾಂಡಿಂಗ್‌ಗಳನ್ನು ಎರಡಕ್ಕೆ ಸೀಮಿತಗೊಳಿಸುವ ನಿಯಮ, ಈ ಹೊಸ ಮಾನದಂಡಗಳಿಂದಾಗಿ ಏಕಾಏಕಿ ಪೈಲಟ್ ಕೊರತೆ ಎದುರಾಗಿ ವಿಮಾನಗಳ ಹಾರಾಟಕ್ಕೆ ಭಾರೀ ಅಡಚಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

 

Related Posts