ಸಾಮಾಜಿಕ ಬದ್ಧತೆ, ಕರುಣೆ ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಸಮಾಜಕ್ಕೆ ಸಾರುವ ಈ ಶ್ರಮದಾನ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ
ಕತ್ತಲಿನ ಪ್ರದೇಶವಾಗಿದ್ದರೂ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಬೆಳಗಿಸಿಕೊಂಡು ಅವರು ಮನೆಯ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುವಲ್ಲಿ ಅಪಾರ ಸೇವಾಭಾವ ತೋರಿದರು
ಸುಳ್ಯ: ಬಡ ವೃದ್ಧ ಮಹಿಳೆಯ ಮನೆ ನಿರ್ಮಾಣ ಕಾರ್ಯಕ್ಕೆ ಶ್ರಮದಾನದ ಮೂಲಕ ಕೈಜೋಡಿಸಿದ ಎಸ್.ವೈ.ಎಸ್ (ಸುನ್ನಿ ಯುವಜನ ಸಂಘ) ಸಾಂತ್ವನ – ಇಸಾಬ ತಂಡದ ಯುವಕರು ಮಾನವೀಯತೆಯ ಹೊಳಪನ್ನು ಮೆರೆದಿದ್ದಾರೆ.
ಅರಂಬೂರು ಪಾಲಡ್ಕದ ಬಳಿ ವಾಸಸ್ಥಳವಿಲ್ಲದೆ ಸಂಕಷ್ಟದಲ್ಲಿದ್ದ ಮೀನಾಕ್ಷಿ ಎಂಬ ಬಡ ವೃದ್ಧೆಯ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯವನ್ನು ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳು ಮುಂದುವರಿಸುತ್ತಿವೆ. ಆದರೆ ಮನೆ ನಿರ್ಮಾಣಗೊಳ್ಳುವ ಸ್ಥಳವು ಹೆದ್ದಾರಿಯಿಂದ ಸುಮಾರು 60–70 ಅಡಿ ಎತ್ತರದ ಗುಡ್ಡ ಪ್ರದೇಶದಲ್ಲಿರುವುದರಿಂದ ಕಲ್ಲು, ಹೊಯ್ಗೆ ಹಾಗೂ ಇತರ ಕಟ್ಟಡ ಸಾಮಗ್ರಿಗಳನ್ನು ಮೇಲಕ್ಕೆ ಸಾಗಿಸುವುದು ಜಾಗತೀಯ ಸವಾಲಾಗಿ ಪರಿಣಮಿಸಿತ್ತು. ಕೆಲಸಗಾರರಿಂದ ಈ ಕಾರ್ಯಕ್ಕಾಗಿ ಹೆಚ್ಚಿನ ವೆಚ್ಚ ಕೇಳಲಾಗಿದ್ದಲ್ಲದೆ, ಸ್ಥಳದ ಕಠಿಣತೆಯಿಂದ ಕೆಲವರು ಕೆಲಸಕ್ಕೆ ಬರಲು ಹಿಂಜರಿದ ಸಂದರ್ಭಗಳು ಎದುರಾಗಿದ್ದವು.
ಈ ವಿಷಯ ತಿಳಿಯುತ್ತಿದ್ದಂತೆಯೇ ಇಸಾಬ ತಂಡದ ಮುಖಂಡ ಸಿದ್ದೀಕ್ ಗೂನಡ್ಕ ಅವರು ತಕ್ಷಣ ಸ್ಪಂದಿಸಿ ಶ್ರಮದಾನ ಸೇವೆ ಗೈಯುವ ಭರವಸೆ ನೀಡಿದರು. ಡಿಸೆಂಬರ್ 11ರಂದು ಸಂಜೆ 15ಕ್ಕೂ ಹೆಚ್ಚು ಯುವಕರು ಸ್ಥಳಕ್ಕೆ ಧಾವಿಸಿ ಕಲ್ಲುಗಳನ್ನು ರಸ್ತೆ ಮಟ್ಟದಿಂದ ಎತ್ತರದ ನಿವೇಶನ ಜಾಗಕ್ಕೆ ಹೊತ್ತೊಯ್ಯುವ ದುಸ್ತರ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸಿದರು. ಕತ್ತಲಿನ ಪ್ರದೇಶವಾಗಿದ್ದರೂ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಬೆಳಗಿಸಿಕೊಂಡು ಅವರು ಮನೆಯ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುವಲ್ಲಿ ಅಪಾರ ಸೇವಾಭಾವ ತೋರಿದರು
ಈ ಶ್ರಮದಾನ ಕಾರ್ಯದಲ್ಲಿ ಸಾಂತ್ವನ–ಇಸಾಬ ತಂಡದ ಉಪಾಧ್ಯಕ್ಷ ಎ.ಎಂ. ಫೈಝಲ್ ಝುಹ್ರಿ, ಕಾರ್ಯದರ್ಶಿ ರಝಾಕ್ ಅಲೆಕ್ಕಾಡಿ, ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, ಅಜ್ಜಾವರ ಸರ್ಕಲ್ ಕಾರ್ಯದರ್ಶಿ ನಸೀರ್ ಅಡ್ಕಾರು, ಬೆಳ್ಳಾರೆ ಸರ್ಕಲ್ ಕಾರ್ಯದರ್ಶಿ ಮುನೀರ್ ಬೆಳ್ಳಾರೆ, ಸುಳ್ಯ ಸರ್ಕಲ್ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಪ್ರಧಾನ ಕಾರ್ಯದರ್ಶಿ ನೌಷಾದ್ ಕೆರೆಮೂಲೆ, ಕಾರ್ಯಕರ್ತರಾದ ಅಶ್ರಫ್ ಚಡಾವು, ಅಫ್ರೀದ್ ಜಾಲ್ಸೂರು ಅಡ್ಕಾರು, ಶರೀಫ್ ಜಯನಗರ, ಆಬಿದ್ ಕಲ್ಲುಮುಟ್ಲು, ಸಫ್ವಾನ್ ಸುಣ್ಣಮೂಲೆ, ಹಸೈನಾರ್ ಸೇರಿದಂತೆ ಅನೇಕರು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಭಾರತೀಯ ರೆಡ್ ಕ್ರಾಸ್ ಸುಳ್ಯ ಘಟಕದ ಸಭಾಪತಿ ಪಿ.ಬಿ. ಸುಧಾಕರ್ ರೈ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯೂಸುಫ್ ಅಂಜಿಕಾರ್ ಹಾಜರಿದ್ದು ತಂಡದ ಪ್ರಯತ್ನಕ್ಕೆ ಅಭಿನಂದನೆ ವ್ಯಕ್ತಪಡಿಸಿ ಅಗತ್ಯ ಸಹಕಾರ ನೀಡಿದ್ದಾರೆ.



