ಇತರೆ, ಸ್ಥಳೀಯ

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಪ್ರಕರಣ – ಗರ್ಭಿಣಿ ಯುವತಿ ಭೀಕರ ಕೊಲೆ

ಸಂಸ್ಕೃತಿ, ಸಂಪ್ರದಾಯ ಹಾಗೂ ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ನಾಗರಿಕ ಸಮಾಜದ ಆತ್ಮವನ್ನೇ ಗಾಯಗೊಳಿಸುತ್ತಿವೆ. ವ್ಯಕ್ತಿಯ ಬದುಕು, ಆಯ್ಕೆ ಮತ್ತು ಸ್ವಾತಂತ್ರ್ಯಕ್ಕಿಂತಲೂ ಕಟ್ಟುಪಾಡುಗಳು ಮಹತ್ವವೆಂದು ಭಾವಿಸುವ ಮನೋಭಾವವೇ ಮರ್ಯಾದ ಹತ್ಯೆಗಳ ಮೂಲವಾಗಿದೆ. ಇದು ಕೇವಲ ಕಾನೂನುಬಾಹ್ಯ ಕೃತ್ಯವಲ್ಲ; ಮಾನವೀಯ ಮೌಲ್ಯಗಳ ಮೇಲೆ ನಡೆಯುತ್ತಿರುವ ಕ್ರೂರ ದಾಳಿಯಾಗಿದೆ.

ರಾಜ್ಯದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಪಾಲಕರ ವಿರೋಧದ ನಡುವೆಯೂ ಅನ್ಯ ಜಾತಿಯ ಯುವಕನೊಂದಿಗೆ ವಿವಾಹವಾಗಿದ್ದ ಗರ್ಭಿಣಿ ಯುವತಿಯನ್ನು ತಂದೆ ಹಾಗೂ ಕುಟುಂಬಸ್ಥರು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತ ಯುವತಿಯನ್ನು ಮಾನ್ಯಾ ಪಾಟೀಲ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯುವಕನ ತಂದೆ–ತಾಯಿ ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ಮಂದಿ ವಶಕ್ಕೆ

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ, ಕುಟುಂಬದ ವೀರನಗೌಡ ಹಾಗೂ ಅರುಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇನ್ನೂ ಏಳು–ಎಂಟು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ.

ಘಟನೆಯ ಹಿನ್ನೆಲೆ

ಮಾನ್ಯಾ ಪಾಟೀಲ ಹಾಗೂ ವಿವೇಕಾನಂದ ದೊಡ್ಡಮನಿ ಪರಸ್ಪರ ಪ್ರೀತಿಸುತ್ತಿದ್ದು, ಈ ಸಂಬಂಧಕ್ಕೆ ಯುವತಿಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನವೂ ನಡೆದಿತ್ತು. ಆದರೂ, ಸುಮಾರು ಎಂಟು ತಿಂಗಳ ಹಿಂದೆ ಇಬ್ಬರೂ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ದಂಪತಿ ಇತ್ತೀಚೆಗೆ ಇನಾಂವೀರಾಪುರ ಗ್ರಾಮಕ್ಕೆ ಮರಳಿದ್ದರು. ಈ ವಿಚಾರ ತಿಳಿದ ಯುವತಿಯ ತಂದೆ ಹಾಗೂ ಕುಟುಂಬಸ್ಥರು ಭಾನುವಾರ ಎರಡು ಗುಂಪುಗಳಾಗಿ ಮನೆ ಹಾಗೂ ಹೊಲಕ್ಕೆ ನುಗ್ಗಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ಯುವಕ ವಿವೇಕಾನಂದ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Related Posts