ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಸೂರಿಕುಮೇರು ಜಂಕ್ಷನ್ ಸಮೀಪ ಯಾವುದೇ ಕ್ರಾಸಿಂಗ್ ನೀಡದೆ ಸಂಪೂರ್ಣವಾಗಿ ಮಾರ್ಗವನ್ನು ಬಂದ್ ಮಾಡಿರುವುದರಿಂದ ಸ್ಥಳೀಯ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಸೂರಿಕುಮೇರು ಜಂಕ್ಷನ್ ಬಳಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬರಿಮಾರು ಮಹಮ್ಮಾಯಿ ದೇವಸ್ಥಾನ, ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ, ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಹಾಗೂ ಬರಿಮಾರು–ಸರಪಾಡಿ, ಸೂರಿಕುಮೇರು–ಕೋರ್ಯ ಸೇರಿದಂತೆ ಒಳ ರಸ್ತೆಗಳಿಗೆ ಸಂಪರ್ಕ ಕಡಿತಗೊಂಡಿರುವುದರಿಂದ ಜನರು ಹಾಗೂ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ಅಥವಾ ಎರಡು ಕಿಲೋಮೀಟರ್ ದೂರ ಹೋಗಿ ಕ್ರಾಸಿಂಗ್ ಮಾಡಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು, ವೃದ್ಧರು ಹಾಗೂ ದಿನನಿತ್ಯ ಪ್ರಯಾಣಿಕರು ತೀವ್ರ ಸಂಕಷ್ಟ ಪಡುತ್ತಿದ್ದಾರೆ.

ಹಳೀರದಿಂದ ಸೂರಿಕುಮೇರು ನಡುವಿನ ಯಾವುದೇ ಸ್ಥಳದಲ್ಲಿ ತಕ್ಷಣವೇ ಕ್ರಾಸಿಂಗ್ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಸೇರಿದಂತೆ ಹಸೈನ್ ಸಂಕ, ಕೃಷ್ಣಪ್ಪ, ವಸಂತ, ರೋನಿ ಬೋನಿಸ್, ಸತೀಶ್ ಪ್ರಭು, ಲಕ್ಷ್ಮೀನಾರಾಯಣ, ಹನೀಫ್ ಸಂಕ, ಮುಜೀಬ್ ಹಾಗೂ ನೂರಾರು ಸ್ಥಳೀಯ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಮುಖಂಡರು, ಹಿರಿಯರು ಭಾಗವಹಿಸಿದ್ದರು.
ಒಂದು ತಿಂಗಳೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದಿದ್ದಲ್ಲಿ ಪ್ರತಿಭಟನೆಗೆ ಇನ್ನಷ್ಟು ಗಂಭೀರ ಸ್ವರೂಪ ನೀಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ವೇಳೆ ಹೆದ್ದಾರಿ ಕಾಮಗಾರಿ ಇಲಾಖೆಯ ಇಂಜಿನಿಯರ್‌ಗಳಾದ ಬಿನೋದ್ ಹಾಗೂ ಚಿದಾನಂದ ಅವರು ಮನವಿಯನ್ನು ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸಾಕಷ್ಟು ಪೊಲೀಸ್ ಬಲವನ್ನು ನಿಯೋಜಿಸಲಾಗಿತ್ತು.

