Featured, ಇತರೆ, ಸ್ಥಳೀಯ

ಸುಳ್ಯ : ಕಲ್ಲುಗುಂಡಿ ಹೊರಠಾಣೆ ಬಳಿ ಅಕ್ರಮ ಲಾಟರಿ ಸಾಗಾಟ: ₹72 ಸಾವಿರ ಮೌಲ್ಯದ ಕೇರಳ ಲಾಟರಿ ಟಿಕೆಟ್‌ಗಳು ವಶ

ಸುಳ್ಯ, ಫೆ.2:
ಕಲ್ಲುಗುಂಡಿ ಹೊರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಫೆಬ್ರವರಿ 2ರಂದು ಮಧ್ಯಾಹ್ನ 4.15ರ ಸುಮಾರಿಗೆ ಕಲ್ಲುಗುಂಡಿ ಹೊರಠಾಣೆಯ ಬಳಿ ನಡೆದಿದೆ. ಆರೋಪಿಯು ಮೋಟಾರ್ ಸೈಕಲ್‌ನಲ್ಲಿ ಕೇರಳದ ಬಂದಡ್ಕದಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸಿ, ಸಂಪಾಜೆ ಭಾಗದ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್‌ ಠಾಣೆಯ ಅಪರಾಧ ವಿಭಾಗದ ಪೊಲೀಸ್‌ ಉಪನಿರೀಕ್ಷಕಿ ಸರಸ್ವತಿ ಬಿ.ಟಿ. ಅವರು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದರು.
ಈ ವೇಳೆ ಆರೋಪಿ ಸಿಬಿ ಎಂ.ಎಲ್‌ (58), ತಂದೆ ಲೂಕೊಸ್‌ ಎಂ.ಎಲ್‌, ಚಂಬು ಮನೆ, ಚಂಬು ಗ್ರಾಮ, ಬಾಲೆಂಬಿ ಅಂಚೆ, ಮಡಿಕೇರಿ ತಾಲೂಕು ನಿವಾಸಿ ಎಂಬವರನ್ನು ತಡೆದು ಪರಿಶೀಲನೆ ನಡೆಸಲಾಗಿದ್ದು, ವಿವಿಧ ಮುಖಬೆಲೆಯ ಒಟ್ಟು 1,220 ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳು ಪತ್ತೆಯಾಗಿವೆ. ಈ ಲಾಟರಿ ಟಿಕೆಟ್‌ಗಳ ಒಟ್ಟು ಮೌಲ್ಯ ₹72,000 ಆಗಿದೆ.
ಇದಲ್ಲದೆ ಆರೋಪಿತನು ಲಾಟರಿ ಟಿಕೆಟ್‌ಗಳನ್ನು ಖರೀದಿಸಿರುವ ರಸೀದಿಗಳು, ಮೊಬೈಲ್ ಫೋನ್ ಹಾಗೂ KA12 W 4861 ಸಂಖ್ಯೆಯ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಲಾಟರಿ ನಿಯಂತ್ರಣ ಕಾಯ್ದೆ 1998ರ ಕಲಂ 7(iii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಂಜೆ 7.30 ಗಂಟೆಗೆ ವರದಿ ದಾಖಲಾಗಿದೆ. ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts