ಮಂಜೇಶ್ವರ ಕುಂಜತ್ತೂರು ತೂಮಿನಾಡಿನಲ್ಲಿ ದಾರುಣ ಘಟನೆ; ಪ್ಲಸ್ ಒನ್ ವಿದ್ಯಾರ್ಥಿನಿ ಜುಮೈಲಾ ಮೃತ್ಯು – ತಂದೆ ಉಮ್ಮರ್ ವಶಕ್ಕೆ

ಮಂಜೇಶ್ವರ, ಫೆ.1:
ಕುಟುಂಬ ಕಲಹದ ವೇಳೆ ತಂದೆಯ ಕತ್ತಿ ಏಟಿಗೆ ಮಗಳು ಸಾವನ್ನಪ್ಪಿದ ದಾರುಣ ಘಟನೆ ಮಂಜೇಶ್ವರ ಕುಂಜತ್ತೂರು ತೂಮಿನಾಡಿನಲ್ಲಿ ಸೋಮವಾರ ಸಂಜೆ ನಡೆದಿದೆ. ಕುಂಜತ್ತೂರು ತೂಮಿನಾಡು ನಿವಾಸಿ ಹಾಗೂ ಪ್ಲಸ್ ಒನ್ ವಿದ್ಯಾರ್ಥಿನಿ ಜುಮೈಲಾ (16) ಮೃತಳಾಗಿದ್ದಾಳೆ.
ಘಟನೆ ಸೋಮವಾರ ಸಂಜೆ ಸುಮಾರು 5.30ರ ವೇಳೆಗೆ ನಡೆದಿದೆ. ಉಮ್ಮರ್ ಮತ್ತು ಅವರ ಕುಟುಂಬವು ಉಮ್ಮರ್ ಅವರ ಪತ್ನಿಯ ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಪತ್ನಿಯ ಸಹೋದರಿಯ ಪತಿ ಹಾಗೂ ಉಮ್ಮರ್ ನಡುವೆ ಆಸ್ತಿ ವಿಚಾರವಾಗಿ ವಾಗ್ವಾದ ನಡೆದಿದ್ದು, ಜಗಳ ತೀವ್ರಗೊಂಡಿದೆ.
ವಾಗ್ವಾದದ ವೇಳೆ ಉಮ್ಮರ್ ಆಯುಧ ಬಳಸಿ ಪತ್ನಿಯ ಸಹೋದರಿಯ ಪತಿಯನ್ನು ಹಲ್ಲೆ ಮಾಡಲು ಮುಂದಾದಾಗ, ಅದನ್ನು ತಡೆಯಲು ಮಗಳು ಜುಮೈಲಾ ಮಧ್ಯಪ್ರವೇಶಿಸಿದ್ದಾಳೆ. ಈ ಸಂದರ್ಭದಲ್ಲೇ ಆಕೆಗೆ ಕತ್ತಿ ಏಟಿಗೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಕುತ್ತಿಗೆ ಹಾಗೂ ಕಾಲಿಗೆ ತೀವ್ರ ಗಾಯಗೊಂಡ ಜುಮೈಲಾಳನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಇದೇ ಘಟನೆಯಲ್ಲಿ ಪತ್ನಿಯ ಸಹೋದರಿಯ ಪತಿಯಾದ ಶೇಕುಂಞಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಮೃತಳ ತಂದೆ ಉಮ್ಮರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

