ಲಕ್ಕೋ: ಉತ್ತರ ಪ್ರದೇಶದಲ್ಲಿ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿರುವ ಸ್ವಾಮಿ ಅವಿಮುಕೇಶ್ವರಾನಂದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 40 ದಿನಗಳ ಗಡುವು ನೀಡಿದ್ದಾರೆ. ನಿಷೇಧ ಜಾರಿಯಾಗದಿದ್ದರೆ ಆದಿತ್ಯನಾಥ್ ಅವರನ್ನು ‘ನಕಲಿ ಹಿಂದೂ’ ಎಂದು ಘೋಷಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ
ವಾರಾಣಸಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವಿಮುಕೇಶ್ವರಾನಂದ್, “ಕೇಸರಿ ಬಟ್ಟೆ ಧರಿಸಿ ಭಾಷಣ ಮಾಡುವುದರಿಂದ ಮಾತ್ರ ಹಿಂದೂ ಆಗುವುದಿಲ್ಲ. ಹಿಂದೂ ಧರ್ಮದ ಮೊದಲ ಹೆಜ್ಜೆ ಗೋಸೇವೆ ಮತ್ತು ಧರ್ಮರಕ್ಷಣೆ” ಎಂದು ಹೇಳಿದರು.
ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ನೀಡದ ಆಡಳಿತದ ನಡೆಯನ್ನು ಖಂಡಿಸಿ ಅವಿಮುಕ್ತೇಶ್ವರಾನಂದ ಅವರು ಶಂಕರಾಚಾರ್ಯ ಕ್ಯಾಂಪ್‌ನಲ್ಲಿ ಜನವರಿ 18ರಿಂದ ಸತ್ಯಾಗ್ರಹ ನಡೆಸಿದ್ದರು. ಬುಧವಾರ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಭಾರವಾದ ಹೃದಯದಿಂದ ಅಲ್ಲಿಂದ ತೆರಳಿದ್ದರು
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಾನು 11 ದಿನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಯಾವೊಬ್ಬ ಅಧಿಕಾರಿಯೂ ಪುಣ್ಯಸ್ನಾನ ಮಾಡುವಂತೆ ಹೇಳಲಿಲ್ಲ. ಈಗ ತುಂಬಾ ತಡವಾಗಿದೆ. ಮುಂದಿನ ವರ್ಷ ಮಾಘ ಮೇಳದ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ’ ಎಂದು ಹೇಳಿದರು.
ಇದೇ ವೇಳೆ, ‘ಹಿಂದೂ ಧರ್ಮದ ಕುರಿತ ನಿಮ್ಮ ಬದ್ಧತೆಯನ್ನು ಸಾಬೀತು ಮಾಡಲು 40 ದಿನಗಳ ಒಳಗಾಗಿ ಗೋ ಹತ್ಯೆಯನ್ನು ನಿಲ್ಲಿಸಿ. ಆಗ ನೀವೊಬ್ಬ ಹಿಂದೂ ಅನುಯಾಯಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ’ ಎಂದರು.

