Featured, ಇತರೆ, ಸ್ಥಳೀಯ

ಸುಳ್ಯದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಬೃಹತ್ ಜಾಹೀರಾತು ಫಲಕ – 19 ದಿನಗಳಿಂದ ತೆರವು ಆಗದ ಚೌಕಟ್ಟು: ಆತಂಕದಲ್ಲೇ ಸ್ಥಳೀಯರು

ಒಂದು ಕ್ಷಣದ ನಿರ್ಲಕ್ಷ್ಯ… ಜೀವಕ್ಕೆ ದೊಡ್ಡ ಅಪಾಯ! ಕುಸಿದ ಹೋರ್ಡಿಂಗ್‌ನ ಉಕ್ಕಿನ ಚೌಕಟ್ಟು ಇನ್ನೂ ಮೇಲ್ಛಾವಣಿಯಲ್ಲೇ ಬಾಕಿ: ದುರಂತಕ್ಕೆ ಕಾಯುತ್ತಿದೆಯೇ ಆಡಳಿತ ಮಂಡಳಿ?

ಸುಳ್ಯ : ಮಾರ್ಚ್ 28ರಂದು ಬೀಸಿದ ಭಾರಿ ಗಾಳಿ ಮಳೆಗೆ ಸುಳ್ಯ ನಗರದ ಮಸೀದಿ ಸಮೀಪದ ಕಟ್ಟಡದ ಮೇಲಿದ್ದ ಬೃಹತ್ ಉಕ್ಕಿನ ಜಾಹೀರಾತು ಫಲಕವು ಕುಸಿದು ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ.
ಸುಮಾರು 35 ಡಿಗ್ರಿಯಷ್ಟು ವಾಲಿದ ಉಕ್ಕಿನ ಚೌಕಟ್ಟು ಕಳೆದ 19 ದಿನಗಳಿಂದಲೂ ತೆರವುಗೊಳ್ಳದೆ ಕಟ್ಟಡದ ಮೇಲ್ಛಾವಣಿಯಲ್ಲಿ ಅಪಾಯಕಾರಿಯಾಗಿ ಉಳಿದಿದೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಈ ಕುರಿತು ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿಯವರು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಗರ ಆಡಳಿತವು ಕಟ್ಟಡದ ಮಾಲಕರಿಗೆ ನೋಟಿಸ್ ನೀಡಿದರೂ, ತೆರವು ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ ಎಂಬುದು ಗಮನಾರ್ಹವಾಗಿದೆ.

ಕಟ್ಟಡ ಮಾಲಕರ ಪ್ರತಿಕ್ರಿಯೆ.!!

ಈ ಕುರಿತು ಪ್ರತಿಕ್ರಿಯೆ ನೀಡಿದ ಕಟ್ಟಡದ ಮಾಲಕರು, “ಈ ಸಮಸ್ಯೆ ನಮಗೂ ಆತಂಕ ಉಂಟುಮಾಡುತ್ತಿದೆ. ಜಾಹೀರಾತು ಫಲಕ ಅಳವಡಿಸಿದ ಬಳಿಕ ಅದನ್ನು ತೆರವುಗೊಳಿಸುವ ಹೊಣೆಗಾರಿಕೆ ಬಗ್ಗೆ ತಾಂತ್ರಿಕ ಹಾಗೂ ವ್ಯವಸ್ಥಾಪಕ ಸಮಸ್ಯೆಗಳು ಎದುರಾಗಿವೆ. ಕ್ರೇನ್ ತರಿಸಿ ತೆರವು ಮಾಡುವ ಪ್ರಯತ್ನ ನಡೆಯುತ್ತಿದೆ. ನಾಳೆ-ನಾಡಿದ್ದು ಒಳಗಾಗಿ ಕ್ರಮ ಕೈಗೊಳ್ಳಲು ಯತ್ನಿಸುತ್ತೇವೆ” ಎಂದು ತಿಳಿಸಿದ್ದಾರೆ.

ಜಾಹೀರಾತು ಫಲಕ ಅಳವಡಿಸಿದ ಸಂಸ್ಥೆಯ ಪ್ರತಿಕ್ರಿಯೆ.!

ಇದೇ ವೇಳೆ ಜಾಹೀರಾತು ಫಲಕ ಅಳವಡಿಸಿದ ಸಂಸ್ಥೆಯವರೂ ಸಹ ಪ್ರತಿಕ್ರಿಯಿಸಿ, “ನಾವು ನಿರ್ಲಕ್ಷ್ಯ ವಹಿಸಿಲ್ಲ. ನಗರ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ತೆರವು ಕಾರ್ಯಕ್ಕೆ ತಾಂತ್ರಿಕ ಅಡಚಣೆಗಳಿವೆ. ಶುಕ್ರವಾರದಿಂದ ಎರಡು ದಿನಗಳಲ್ಲಿ ತೆರವುಗೊಳಿಸಲು ಪ್ರಯತ್ನಿಸುತ್ತೇವೆ. ಅಗತ್ಯವಿದ್ದರೆ ಬೇರೆ ತಂಡವನ್ನು ನಿಯೋಜಿಸಿ ಕಾರ್ಯ ಪೂರ್ಣಗೊಳಿಸಲಾಗುವುದು” ಎಂದು ಹೇಳಿದ್ದಾರೆ.
ಆದರೆ ಇಷ್ಟೆಲ್ಲಾ ಭರವಸೆಗಳ ನಡುವೆಯೂ ಅಪಾಯಕಾರಿ ಉಕ್ಕಿನ ಚೌಕಟ್ಟು ಇನ್ನೂ ಅದೇ ಸ್ಥಿತಿಯಲ್ಲಿ ಉಳಿದಿದ್ದು, ಯಾವುದೇ ಅನಾಹುತ ಸಂಭವಿಸುವ ಮೊದಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಹೆಚ್ಚಾಗಿದೆ.
m

 

Related Posts