ಮಂಗಳೂರು, ಮೇ 2: ಉಳ್ಳಾಲದ ಹರ್ಝತ್ ಸಯ್ಯದ್ ಮದನಿ ದರ್ಗಾ ಹಾಗೂ ಜುಮ್ಮಾ ಮಸೀದಿಗೆ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಂದಾಗಿದೆ. ಈ ಕುರಿತು ಮಂಡಳಿ ಅಧಿಕೃತ ಆದೇಶ ಹೊರಡಿಸಿದ್ದು, ಚುನಾವಣಾ ಹಾಗೂ ಮತದಾರರ ನೋಂದಣಿ ಪ್ರಕ್ರಿಯೆ ನಡೆಸಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಉಳ್ಳಾಲ ದರ್ಗಾ ಮತ್ತು ಜುಮ್ಮಾ ಮಸೀದಿಯ ಆಡಳಿತವನ್ನು ನೋಡಿಕೊಂಡಿದ್ದ ಹಾಲಿ ವ್ಯವಸ್ಥಾಪಕ ಸಮಿತಿಯ ಮೂರು ವರ್ಷದ ಅವಧಿ 2026ರ ಮಾರ್ಚ್ 7ರಂದು ಪೂರ್ಣಗೊಂಡಿದೆ. ಅವಧಿ ಮುಗಿದ ಹಿನ್ನೆಲೆಯಲ್ಲಿ ತಕ್ಷಣವೇ ಹೊಸ ಸಮಿತಿಯನ್ನು ರಚಿಸುವ ನಿಟ್ಟಿನಲ್ಲಿ ಚುನಾವಣೆಯನ್ನು ನಡೆಸಲು ಮಂಡಳಿ ಕ್ರಮ ಕೈಗೊಂಡಿದೆ.
ಚುನಾವಣಾಧಿಕಾರಿಯಾಗಿ ನಿವೃತ್ತ ವಕ್ಫ್ ಅಧಿಕಾರಿ ಹಾಗೂ ಪ್ರಸ್ತುತ ಸಮಾಲೋಚಕರಾಗಿರುವ ಮೊಹಮ್ಮದ್ ಪಾಷಾ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧಿಕಾರಿಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ನೋಂದಣಿ ಪ್ರಕ್ರಿಯೆ ನಡೆಸುವ ಜವಾಬ್ದಾರಿ ನೀಡಲಾಗಿದೆ.
ಅರ್ಹ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ನೋಂದಣಿ ಕಾರ್ಯ ಪೂರ್ಣಗೊಳಿಸಿದ ಬಳಿಕ ಚುನಾವಣಾ ದಿನಾಂಕವನ್ನು ಘೋಷಿಸಲಾಗುವುದು. ನಂತರ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಇದರ ಮಧ್ಯೆ, ಉಳ್ಳಾಲ ದರ್ಗಾ ಮತ್ತು ಜುಮ್ಮಾ ಮಸೀದಿ ಆಡಳಿತದ ಹಾಲಿ ಸಮಿತಿ ವಿರುದ್ಧವೇ ಕೆಲ ಸದಸ್ಯರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಕಳೆದೊಂದು ವರ್ಷದಿಂದ ಕಾನೂನು ಹೋರಾಟ ನಡೆಸುತ್ತಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆಗಳ ಪರಿಶೀಲನೆಗಾಗಿ ರಾಜ್ಯ ವಕ್ಫ್ ಮಂಡಳಿಗೆ ಹೈಕೋರ್ಟ್ ಆದೇಶ ನೀಡಿದ್ದು, ತನಿಖಾಧಿಕಾರಿಯನ್ನು ನೇಮಕ ಮಾಡುವಂತೆ ಸೂಚನೆ ನೀಡಲಾಗಿತ್ತು.






m
