ಸುಳ್ಯ ನಗರ ಪಂಚಾಯತ್‌ನಲ್ಲಿ ಕಂಡ ಅನಿರೀಕ್ಷಿತ ಘಟನೆ – ನನ್ನ ಅನುಭವ
-ರಶೀದ್ ಜಟ್ಟಿಪಳ್ಳ
(ಜು.2) ಮಧ್ಯಾಹ್ನ ಬೇರೆ ಕೆಲಸದ ನಿಮಿತ್ತ ನಾನು ಸುಳ್ಯ ನಗರ ಪಂಚಾಯತ್ ಕಚೇರಿಗೆ ತೆರಳಿದ್ದೆ. ಆಗ ಮುಖ್ಯಾಧಿಕಾರಿಯವರ ಕೊಠಡಿಯ ಬಳಿ ಗದ್ದಲ ಕೇಳಿಸಿತು. ಏನಾಗಿದೆ ಎಂದು ಅಲ್ಲಿಗೆ ಧಾವಿಸಿದಾಗ, ಒಬ್ಬ ವ್ಯಕ್ತಿ ಬಿಲ್ ಕಲೆಕ್ಟರ್ ರೋಹಿತ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಣ್ಣಾರೆ ಕಂಡೆ.
ಆ ಕ್ಷಣದಲ್ಲಿ ಘಟನೆಗೆ ಕಾರಣವೇನು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಸರ್ಕಾರಿ ಕಚೇರಿಯೊಳಗೆ ಕಣ್ಣೆದುರೇ ಹಲ್ಲೆ ನಡೆಯುತ್ತಿದ್ದುದರಿಂದ ಅದನ್ನು ತಡೆಯುವುದು ನನ್ನ ಕರ್ತವ್ಯವೆಂದು ಭಾವಿಸಿ ಮಧ್ಯ ಪ್ರವೇಶಿಸಿದೆ. ಆದರೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿ ನನ್ನ ಮೇಲೆಯೂ ತಿರುಗಿಬಿದ್ದು ಎರಡು ಏಟು ಬಾರಿಸಿದರು. ನಂತರ ಅವರು ಅಲ್ಲಿಂದ ತೆರಳಿದರು.
ಬಳಿಕ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದಾಗ, ನಗರ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗೆ ಬಿಲ್ ಕಲೆಕ್ಟರ್ ರೋಹಿತ್ ಅವರು ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಪ್ರವೀಣ್ ಕುಮಾರ್ ಅವರು ಕಚೇರಿಗೆ ಬಂದು ಪ್ರಶ್ನಿಸಿ ಹಲ್ಲೆ ನಡೆಸಿರುವುದು ತಿಳಿಯಿತು.
ಈ ಘಟನೆಯ ಸಂಪೂರ್ಣ ಹಿನ್ನೆಲೆ ತಿಳಿದ ಬಳಿಕ, ಆರೋಪ ಎದುರಿಸುತ್ತಿರುವ ಅಧಿಕಾರಿಯ ಕೃತ್ಯವೇ ಈ ಘಟನೆಗೆ ಮೂಲ ಕಾರಣ ಎಂಬ ಅಭಿಪ್ರಾಯ ನನಗೆ ಮೂಡಿದೆ. ಆ ಕಾರಣದಿಂದ ನನ್ನ ಮೇಲೂ ಹಲ್ಲೆ ನಡೆದಿದ್ದರೂ, ಪ್ರವೀಣ್ ಕುಮಾರ್ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸದಿರಲು ನಾನು ನಿರ್ಧರಿಸಿದ್ದೇನೆ.
ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಯಾವುದೇ ಕೃತ್ಯದ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅದೇ ವೇಳೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸಹ ಸರಿಯಾದ ಮಾರ್ಗವಲ್ಲ. ಈ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.




m
