ಸುಳ್ಯ, ಜು. 5: ಜುಲೈ 6ರಂದು ಸುಳ್ಯದಲ್ಲಿ ನಡೆಯಲಿರುವ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸಾರ್ವಜನಿಕ ಸನ್ಮಾನ ಸಮಾರಂಭದ ಸಿದ್ಧತೆಗಳು ಒಂದೆಡೆ ಭರ್ಜರಿಯಾಗಿ ಸಾಗುತ್ತಿದ್ದರೆ, ಮತ್ತೊಂದೆಡೆ ಕಾರ್ಯಕ್ರಮದ ಪೋಸ್ಟರ್‌ಗಳು ಹೊಸ ಚರ್ಚೆಗೆ ಕಾರಣವಾಗಿವೆ.
ನಗರ ಪ್ರದೇಶಗಳು ಹಾಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಅಳವಡಿಸಲಾದ ಬ್ಯಾನರ್‌ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಕಾಣಿಸಿಕೊಂಡಿದ್ದರೂ, ಜಾಲತಾಣಗಳಲ್ಲಿ ಹಾಗೂ ವಾಟ್ಸಪ್ ಮೂಲಕ ಪ್ರಸಾರವಾಗುತ್ತಿರುವ ಡಿಜಿಟಲ್ ಪೋಸ್ಟರ್‌ಗಳಲ್ಲಿ ಅವರ ಭಾವಚಿತ್ರ ಕಾಣಿಸದಿರುವುದು ಕೆಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಸಮಾಧಾನ ಹಾಗೂ ಇರಿಸುಮುರುಸುಗೆ ಕಾರಣವಾಗಿದೆ.

ಸಮಾರಂಭದ ವಿವಿಧ ಪೋಸ್ಟರ್‌ಗಳಲ್ಲಿ ಹಲವು ನಾಯಕರು ಮತ್ತು ಮುಖಂಡರ ಭಾವಚಿತ್ರಗಳು ರಾರಾಜಿಸುತ್ತಿದ್ದರೂ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಮಾತ್ರ ಕಾಣಿಸದಿರುವುದು ಅವರ ಅಭಿಮಾನಿಗಳ ಗಮನ ಸೆಳೆದಿದೆ. ಇದರಿಂದ ಕೆಲ ಅಭಿಮಾನಿಗಳು ಪೋಸ್ಟರ್ ವಿನ್ಯಾಸಕರ ಕಣ್ಣಿಗೆ ಮಾತ್ರ ಕಾಣದ ವಿಶೇಷ ತಂತ್ರಜ್ಞಾನ ಬಳಸಲಾಗಿದೆಯೇ?” ಎಂದು ಹಾಸ್ಯಮಿಶ್ರಿತವಾಗಿ ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು “ಮುಖಂಡರ ಸಾಲಿನಲ್ಲಿ ಎಲ್ಲರೂ ಇದ್ದಾರೆ, ಆದರೆ ಸಿದ್ದರಾಮಯ್ಯ ಎಲ್ಲಿಗೆ ಹೋದರು?” ಎಂದು ವ್ಯಂಗ್ಯಭರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು “ಇದು ತಾಂತ್ರಿಕ ದೋಷವೋ ಅಥವಾ ರಾಜಕೀಯ ಗಣಿತವೋ?” ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಆದರೆ, ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿರುವವರು ಈ ವಿಚಾರವನ್ನು ದೊಡ್ಡದಾಗಿ ಪರಿಗಣಿಸದೆ, ಸನ್ಮಾನ ಸಮಾರಂಭವನ್ನು ಯಶಸ್ವಿಗೊಳಿಸುವತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಿದ್ದರಾಮಯ್ಯ ಅಭಿಮಾನಿಗಳು ಮಾತ್ರ “ಮುಂದಿನ ಪೋಸ್ಟರ್ ಆವೃತ್ತಿಯಲ್ಲಿ ನಮ್ಮ ನಾಯಕನ ಫೋಟೋ ಕಾಣಿಸಲೇಬೇಕು” ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ, ಸನ್ಮಾನ ಸಮಾರಂಭದ ಭರ್ಜರಿ ಸಿದ್ಧತೆಯ ನಡುವೆ, ಒಂದು ಫೋಟೋ ಕಾಣೆಯಾಗಿರುವ ವಿಚಾರವೇ ಇದೀಗ ಸುಳ್ಯದ ರಾಜಕೀಯ ವಲಯದಲ್ಲಿ ಚರ್ಚೆಯ ‘ಹಾಟ್ ಟಾಪಿಕ್’ ಆಗಿದೆ.




m
