“ಮಾಸಿಕ ಭತ್ಯೆ, ವಿಮೆ ಹಾಗೂ ಪಿಂಚಣಿ ಸೌಲಭ್ಯ ನೀಡುವಂತೆ ಸರಕಾರಕ್ಕೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ-ಮಾಲಕರ ಸಂಘದ ಒತ್ತಾಯ
ಬೆಂಗಳೂರು, ಜು. 6: ರಾಜ್ಯದಾದ್ಯಂತ ತುರ್ತು ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಖಾಸಗಿ ಆಂಬುಲೆನ್ಸ್ ಚಾಲಕರಿಗೆ ವಿಶೇಷ ಕಲ್ಯಾಣ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸುಳ್ಯ ತಾಲೂಕು ಖಾಸಗಿ ಆಂಬುಲೆನ್ಸ್ ಚಾಲಕ-ಮಾಲಕರ ಸಂಘದ ವತಿಯಿಂದ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಅಪಘಾತ, ತುರ್ತು ಚಿಕಿತ್ಸಾ ಪರಿಸ್ಥಿತಿ ಹಾಗೂ ರೋಗಿಗಳ ಸಾಗಣೆಯಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿರುವ ಖಾಸಗಿ ಆಂಬುಲೆನ್ಸ್ ಚಾಲಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ವಿಶೇಷ ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ, ಮಾಸಿಕ ಭತ್ಯೆ ಅಥವಾ ನಿವೃತ್ತಿ ಪಿಂಚಣಿ ಸೌಲಭ್ಯಗಳು ಲಭ್ಯವಿಲ್ಲ ಎಂಬುದು ಚಾಲಕರ ಸಂಘಟನೆಗಳ ಅಸಮಾಧಾನವಾಗಿದೆ.
ಈ ಹಿನ್ನೆಲೆ, ಕರ್ನಾಟಕ ಸರ್ಕಾರವು ಖಾಸಗಿ ಆಂಬುಲೆನ್ಸ್ ಚಾಲಕರಿಗಾಗಿ ವಿಶೇಷ ಕಲ್ಯಾಣ ಮಂಡಳಿ ರಚಿಸಿ, ಮಾಸಿಕ ಜೀವನೋಪಾಯ ಭತ್ಯೆ, ಆರೋಗ್ಯ ಮತ್ತು ಅಪಘಾತ ವಿಮೆ, ಮಕ್ಕಳ ಶಿಕ್ಷಣ ನೆರವು, ನಿವೃತ್ತಿ ಪಿಂಚಣಿ ಹಾಗೂ ತುರ್ತು ಪರಿಹಾರ ನಿಧಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಸಮಗ್ರ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.
ಇದಲ್ಲದೆ, ರಾಜ್ಯದ ಎಲ್ಲಾ ಖಾಸಗಿ ಆಂಬುಲೆನ್ಸ್ ಚಾಲಕರನ್ನು ನೋಂದಣಿ ವ್ಯಾಪ್ತಿಗೆ ಒಳಪಡಿಸಿ, ಅವರಿಗೆ ಗುರುತಿನ ಚೀಟಿ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋವಿಡ್-19 ಸೇರಿದಂತೆ ಅನೇಕ ತುರ್ತು ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಖಾಸಗಿ ಆಂಬುಲೆನ್ಸ್ ಸಿಬ್ಬಂದಿಯ ಸೇವೆಯನ್ನು ಪರಿಗಣಿಸಿ, ಅವರಿಗೆ ಸೂಕ್ತ ಗೌರವ ಮತ್ತು ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರವು ಸಕಾರಾತ್ಮಕ ನಿರ್ಧಾರ ಕೈಗೊಂಡಲ್ಲಿ, ಸಾವಿರಾರು ಖಾಸಗಿ ಆಂಬುಲೆನ್ಸ್ ಚಾಲಕರ ಕುಟುಂಬಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ದೊರೆಯಲಿದ್ದು, ತುರ್ತು ಆರೋಗ್ಯ ಸೇವಾ ವ್ಯವಸ್ಥೆಯೂ ಮತ್ತಷ್ಟು ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ವರದಿ : ರುನೈಸ್ ಕೊಯನಾಡು, ವರದಿಗಾರರು ಇವಾರ್ತೆ ಸುಳ್ಯ .




m
