Featured, ಅಂಕಣ, ಸ್ಥಳೀಯ

ತೂಗು ಸೇತುವೆಗಳ ಮೂಲಕ ಸಾವಿರಾರು ಜೀವಗಳಿಗೆ ಸಂಪರ್ಕ ಕಲ್ಪಿಸಿದ್ದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ

ಸುಳ್ಯ: ನದಿಗಳ ಮೇಲಷ್ಟೇ ಅಲ್ಲ, ಸಾವಿರಾರು ಜನರ ಬದುಕಿನ ನಡುವೆ ಭರವಸೆಯ ಸೇತುವೆಗಳನ್ನು ಕಟ್ಟಿದ ತೂಗು ಸೇತುವೆಗಳ ನಿರ್ಮಾತೃ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಂದು ಬೆಳಿಗ್ಗೆ ನಿಧನರಾದರು.

ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಮಾತ್ರವಲ್ಲ, ಗ್ರಾಮೀಣಾಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಒಬ್ಬ ವಿನೂತನ ಸಾಧಕನನ್ನು ಕಳೆದುಕೊಂಡಂತಾಗಿದೆ.

ಇಂಜಿನಿಯರಿಂಗ್ ಪದವಿ ಪಡೆದ ಬಳಿಕ “ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್” ಸ್ಥಾಪಿಸಿದ್ದ ಡಾ. ಭಾರದ್ವಾಜ್ ಅವರು, ಬಳಿಕ ತೂಗು ಸೇತುವೆಗಳ ನಿರ್ಮಾಣವನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು. ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಲ್ಲಿಯೂ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿ, ಸಾವಿರಾರು ಗ್ರಾಮಗಳ ಜನರ ಸಂಚಾರಕ್ಕೆ ಸುರಕ್ಷಿತ ದಾರಿಯನ್ನು ಕಲ್ಪಿಸುವ ಮೂಲಕ “ತೂಗು ಸೇತುವೆಗಳ ಸರದಾರ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಗ್ರಾಮೀಣ ಜನರ ಬದುಕಿಗೆ ನೇರವಾಗಿ ಸ್ಪಂದಿಸಿದ ಅವರ ಅಸಾಧಾರಣ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2017ರಲ್ಲಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಡಾ. ಗಿರೀಶ್ ಭಾರದ್ವಾಜ್ ಅವರ ಪತ್ನಿ ಉಷಾ ಅವರು ಈ ಹಿಂದೆ ನಿಧನರಾಗಿದ್ದು, ಪುತ್ರರಾದ ಸುದರ್ಶನ್ ಮತ್ತು ಪತಂಜಲಿ, ಪುತ್ರಿ ರಷ್ಯಾ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ಅಗಲಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

m

Related Posts