ಸುಳ್ಯ, ಜು. 7: ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕೃತರು ಹಾಗೂ “ತೂಗು ಸೇತುವೆಗಳ ಸರದಾರ” ಎಂದೇ ಖ್ಯಾತರಾಗಿದ್ದ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ (ಸಚಿವ ದರ್ಜೆ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ತಮ್ಮ ಶೋಕ ಸಂದೇಶದಲ್ಲಿ ಮಾತನಾಡಿದ ಅವರು, ಡಾ. ಗಿರೀಶ್ ಭಾರದ್ವಾಜ್ ಅವರು ಕೇವಲ ದೇಶದ ಶ್ರೇಷ್ಠ ತೂಗು ಸೇತುವೆ ನಿರ್ಮಾಣ ತಜ್ಞರಷ್ಟೇ ಅಲ್ಲ, ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿತ್ವವಾಗಿದ್ದರು ಎಂದು ಸ್ಮರಿಸಿದ್ದಾರೆ.
ತೆಕ್ಕಿಲ್ ಸಮುದಾಯ ಭವನ ಹಾಗೂ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಕಟ್ಟಡ ಕಾಮಗಾರಿಗಳಿಗೆ ಅವರು ಮಾರ್ಗದರ್ಶಕರಾಗಿ ಅಮೂಲ್ಯ ಸಲಹೆಗಳನ್ನು ನೀಡಿದ್ದರು. ಅಲ್ಲದೆ, ಸಂಪಾಜೆ ಗ್ರಾಮದ ಗೂನಡ್ಕ–ಪೇರಡ್ಕ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ದೋಣಿಯೇ ಸಂಚಾರದ ಏಕೈಕ ಮಾರ್ಗವಾಗಿದ್ದ ಪರಿಸ್ಥಿತಿಯನ್ನು ಮನಗಂಡು, ಜನಾರ್ಧನ ಪೂಜಾರಿ ಅವರ ಅನುದಾನದಲ್ಲಿ ತೂಗು ಸೇತುವೆ ನಿರ್ಮಿಸಿ, ಸ್ಥಳೀಯ ಜನರ ದೈನಂದಿನ ಸಂಚಾರಕ್ಕೆ ಶಾಶ್ವತ ಪರಿಹಾರ ಒದಗಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಜನಜೀವನಕ್ಕೆ ಹೊಸ ದಾರಿಯನ್ನು ತೋರಿಸಿದ ಡಾ. ಭಾರದ್ವಾಜ್ ಅವರು “ತೂಗು ಸೇತುವೆಗಳ ಸರದಾರ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೂ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಭಗವಂತನು ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧು-ಬಳಗದವರಿಗೆ ಮತ್ತು ಹಿತೈಷಿಗಳಿಗೆ ಕರುಣಿಸಲಿ ಎಂದು ಟಿ.ಎಂ. ಶಹೀದ್ ತೆಕ್ಕಿಲ್ ತಮ್ಮ ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.




m
