Featured, ಇತರೆ, ರಾಜಕೀಯ, ಸ್ಥಳೀಯ

ಸಮಾಜ ಸೇವೆಯೇ ಧ್ಯೇಯ: ಸಂಪಾಜೆಯ ತಾಜುದ್ದೀನ್ ಟರ್ಲಿ ರಾಜಕೀಯ ಅಂಗಳಕ್ಕೆ?

“ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ಜನಸಂಪರ್ಕವೇ ಮುಖ್ಯ” – ಮತದಾರರ ಅಭಿಪ್ರಾಯ

ಸುಳ್ಯ: ಸದಾ ರಾಜಕೀಯ ಚಟುವಟಿಕೆಗಳಿಂದ ಸುದ್ದಿಯಲ್ಲಿರುವ ಸಂಪಾಜೆ ಗ್ರಾಮದಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಸಿದ್ಧತೆಗಳು ಆರಂಭಗೊಂಡಿವೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಂತ್ರಗಳನ್ನು ರೂಪಿಸುತ್ತಿರುವ ಈ ಸಂದರ್ಭದಲ್ಲಿ, ಗ್ರಾಮದ ಜನಪರ ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಟರ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನ ಕೈಗೊಂಡಿರುವ ಸುದ್ದಿ ಮತ್ತೊಮ್ಮೆ ಸಂಪಾಜೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ತಾಜುದ್ದೀನ್ ಟರ್ಲಿ ಎಂಬ ಹೆಸರು ಸುಳ್ಯ ತಾಲೂಕಿನ ಜನತೆಗೆ ಹೊಸದೇನಲ್ಲ. ಸಮಾಜಸೇವೆಯ ಮೂಲಕ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಅವರು, ವೈಯಕ್ತಿಕವಾಗಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸಮಾಜದ ಸೇವೆಯಲ್ಲಿ ಎಂದಿಗೂ ಹಿಂದೆ ಸರಿದವರಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿಯಾಗುವುದು ಹಾಗೂ ಗ್ರಾಮಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅವರ ಕಾರ್ಯಶೈಲಿಯ ವಿಶೇಷತೆಯಾಗಿದೆ.
ಸ್ವಾರ್ಥಕ್ಕಿಂತ ಸಮಾಜದ ಹಿತವೇ ಮುಖ್ಯ ಎಂಬ ಮನೋಭಾವದಿಂದ ಹಲವು ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಿರುವ ತಾಜುದ್ದೀನ್ ಟರ್ಲಿ, ಜನರ ವಿಶ್ವಾಸವನ್ನು ಗಳಿಸಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುವ ಅವರ ಸೇವಾ ಮನೋಭಾವಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸಂಪಾಜೆ ಗ್ರಾಮದ ರಾಜಕೀಯ ಚಿತ್ರಣಕ್ಕೆ ಹೊಸ ಆಯಾಮ ದೊರೆಯಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಅಂತಿಮವಾಗಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ ತಾಜುದ್ದೀನ್ ಟರ್ಲಿ ಅವರ ಹೆಸರು ಈಗಾಗಲೇ ಸಂಪಾಜೆ ಗ್ರಾಮದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿರುವುದು ಮಾತ್ರ ನಿಜ.
ಈ ಕುರಿತು ಇವಾರ್ತೆ ಪ್ರತಿನಿಧಿ ತಾಜುದ್ದೀನ್ ಅವರನ್ನು ಸಂಪರ್ಕಿಸಿದಾಗ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಂಪಾಜೆ ಗ್ರಾಮದ ಪ್ರಥಮ ವಾರ್ಡ್‌ನಿಂದ ಸ್ಪರ್ಧಿಸುವುದು ಖಚಿತ ಎಂದು ಅವರು ತಿಳಿಸಿದರು.
ಆದರೆ, ಯಾವುದೇ ರಾಜಕೀಯ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಬೇಕೇ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೇ ಎಂಬ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದುವರೆಗೆ ಯಾವುದೇ ರಾಜಕೀಯ ಪಕ್ಷವು ತಮ್ಮನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು
m

Related Posts