ಈಶ್ವರಮಂಗಲ: ಪುಣ್ಯ ರಬೀಉಲ್ ಅವ್ವಲ್ ತಿಂಗಳ ಆಗಮನದ ಸಂಭ್ರಮವನ್ನು ಸಾರುವ ನಿಟ್ಟಿನಲ್ಲಿ ತ್ವೈಬಾ ಎಜುಕೇಶನ್ ಸೆಂಟರ್ ವತಿಯಿಂದ ಆಗಸ್ಟ್ 13ರಂದು ಈಶ್ವರಮಂಗಲದಲ್ಲಿ ಮಿಲಾದ್ ಘೋಷಣಾ ರ್ಯಾಲಿ ನಡೆಯಿತು.

ತ್ವೈಬಾ ಎಜುಕೇಶನ್ ಸೆಂಟರ್ನಿಂದ ಸಡಗರದಿಂದ ಆರಂಭಗೊಂಡ ರ್ಯಾಲಿಯು ಮಿಲಾದ್ ಸಂದೇಶವನ್ನು ಜನಮನಗಳಿಗೆ ತಲುಪಿಸುತ್ತಾ ಈಶ್ವರಮಂಗಲದ ರಾಜಬೀದಿಗಳಲ್ಲಿ ಅತ್ಯಂತ ಶಿಸ್ತುಬದ್ಧವಾಗಿ, ವರ್ಣರಂಜಿತವಾಗಿ ಹಾಗೂ ಆಕರ್ಷಣೀಯವಾಗಿ ಸಾಗಿ ಈಶ್ವರಮಂಗಲ ಜಂಕ್ಷನ್ನಲ್ಲಿ ಸಮಾಪ್ತಿಗೊಂಡಿತು.

ರ್ಯಾಲಿಯುದ್ದಕ್ಕೂ ತ್ವೈಬಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಪ್ರದಾಯಿಕ ‘ದಫ್ ಪ್ರದರ್ಶನ’ ಸಾರ್ವಜನಿಕರ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ಜೊತೆಗೆ ಆಕರ್ಷಕ ಫ್ಲವರ್ ಶೋ ಹಾಗೂ ಪುಟಾಣಿ ಮಕ್ಕಳ ಬಲೂನ್ ಶೋ ಇಡೀ ರ್ಯಾಲಿಗೆ ಮತ್ತಷ್ಟು ಮೆರುಗು ನೀಡಿದವು. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಈ ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊಂಡರು.
ಪ್ರಮುಖ ಆಧ್ಯಾತ್ಮಿಕ ನಾಯಕರಾದ ಉಮರ್ ಜಿಫ್ರಿ ತಂಙಳ್ ಅವರು ದುಆ ನೆರವೇರಿಸಿ ಚಾಲನೆ ನೀಡಿದರು. ತ್ವೈಬಾ ಸಂಸ್ಥೆಯ ಉಪಾಧ್ಯಕ್ಷರಾದ ಹಂಝ ಉಸ್ತಾದ್ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ನೇತೃತ್ವವನ್ನು ವಹಿಸಿದ್ದರು.
ರ್ಯಾಲಿಯ ಸಮಾರೋಪ ಸಂದರ್ಭದಲ್ಲಿ ಜಂಕ್ಷನ್ನಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಪ್ರಮುಖ ಭಾಷಣಕಾರ ಸ್ವಾದಿಕ್ ಮುಈನಿ ಗಡಿಯಾರ ಅವರು, ಪ್ರವಾದಿ ಮುಹಮ್ಮದ್ (ಸ.ಅ) ಅವರ ಮಾನವೀಯತೆ, ಕರುಣೆ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುವ ಸಂದೇಶ ಭಾಷಣ ಮಾಡಿದರು. “ಅವರ ಜೀವನ ಮತ್ತು ಬೋಧನೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಇಡೀ ಮಾನವಕುಲಕ್ಕೆ ಶಾಂತಿ, ಸೌಹಾರ್ದತೆ ಮತ್ತು ಕಾರುಣ್ಯದ ಸಂದೇಶವನ್ನು ಸಾರುತ್ತವೆ,” ಎಂದರು.

ಈ ಐತಿಹಾಸಿಕ ಘೋಷಣಾ ರ್ಯಾಲಿಯಲ್ಲಿ ಧಾರ್ಮಿಕ ಹಲವಾರು ಉಲಮಾ-ಉಮರಾ ನಾಯಕರು, ವಿವಿಧ ಸಂಘಟನೆಗಳ ಪ್ರಮುಖರುಕ, ತ್ವೈಬಾ ಸಂಸ್ಥೆಯ ಕಾರ್ಯಕರ್ತರು, ‘ಖದಮುಲ್ ವಿಸ್ವಾಲ್’ನಸಕ್ರಿಯ ಸದಸ್ಯರು ಹಾಗೂ ಸಂಸ್ಥೆಯ ಹಿತೈಷಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಇಡೀ ಈಶ್ವರಮಂಗಲ ಪೇಟೆಯು ಮಿಲಾದ್ ಹಬ್ಬದ ಸಡಗರದ ವಾತಾವರಣದಿಂದ ಕಂಗೊಳಿಸುತ್ತಿತ್ತು.

ಪವಿತ್ರ ರಬೀಉಲ್ ಅವ್ವಲ್ ತಿಂಗಳ ಸಂದೇಶವನ್ನು ಜನಮನಗಳಿಗೆ ತಲುಪಿಸುವುದರ ಜೊತೆಗೆ, ಪ್ರವಾದಿ ﷺ ಅವರ ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದತೆಯ ಸಂದೇಶವನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆದ ರ್ಯಾಲಿ ಗಮನಾರ್ಹವಾಗಿ ಮೂಡಿಬಂತು.
