Featured, ಇತರೆ, ಸ್ಥಳೀಯ

ಅಂಗೈಯಲ್ಲೇ ಡೆತ್ ನೋಟ್ ಬರೆದು ಯುವ ವೈದ್ಯೆ ಆತ್ಮಹತ್ಯೆ ಪ್ರಕರಣ : ಪೊಲೀಸ್ ಅಧಿಕಾರಿ ಅಮಾನತು, ರಾಜಕೀಯ ವಲಯದಲ್ಲಿ ತೀವ್ರ ಗೊಂಡ ಚರ್ಚೆ.!!?

ದೇಶದ ವಿವಿಧ ಭಾಗಗಳಲ್ಲಿ ರಾಜಕೀಯ ಒತ್ತಾಸೆಗಳು ದಿನೇ ದಿನೇ ಹೆಚ್ಚುತ್ತಿವೆ. ಅಧಿಕಾರ, ಹುದ್ದೆ, ತನಿಖೆ, ಅಥವಾ ನ್ಯಾಯದ ನಿರ್ಣಯಗಳ ಮೇಲೆಯೂ ರಾಜಕೀಯ ಪ್ರಭಾವ ಹೇರಲಾಗುತ್ತಿರುವುದು ಸಾಮಾನ್ಯ ಜನರಲ್ಲಿ ಆತಂಕ ಉಂಟುಮಾಡಿದೆ.

ಮಹಾರಾಷ್ಟ್ರ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಯುವ ವೈದ್ಯೆಯೊಬ್ಬಳು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಸಾವಿಗೂ ಮುನ್ನ ಆಕೆ ತನ್ನ ಅಂಗೈಯಲ್ಲೇ ಡೆತ್ ನೋಟ್ ಬರೆದು ಪೊಲೀಸ್ ಅಧಿಕಾರಿಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ರಾತ್ರಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ಟನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಆತ್ಮಹತ್ಯೆಗೂ ಮೊದಲು ಆಕೆ ತನ್ನ ಎಡಗೈಯಲ್ಲಿ ಬರೆದ ಆತ್ಮಹತ್ಯೆ ಪತ್ರದಲ್ಲಿ ಪೊಲೀಸ್ ಅಧಿಕಾರಿಯಿಂದ ಬಂದ ದೈಹಿಕ ಮತ್ತು ಮಾನಸಿಕ ಹಿಂಸೆ ಬಗ್ಗೆ ವಿವರಿಸಿದ್ದಾರೆ.

ಆ ಪತ್ರದಲ್ಲಿ, “ನನ್ನ ಸಾವಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಗೋಪಾಲ್ ಬುಡ್ನೆ ಕಾರಣ. ಆತ ನಾಲ್ಕು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಐದು ತಿಂಗಳಿಗೂ ಹೆಚ್ಚು ಕಾಲ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ,” ಎಂದು ಆಕೆ ಬರೆದಿದ್ದಾಳೆ. ಈ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐ ಗೋಪಾಲ್ ಬುಡ್ನೆ ಅವರನ್ನು ತಕ್ಷಣ ಅಮಾನತುಗೊಳಿಸಿದೆ.

ಮೃತ ವೈದ್ಯೆ ಕಳೆದ ಜೂನ್ 19ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಡಿಎಸ್‌ಪಿಗೆ ಪತ್ರ ಬರೆದು, ಗ್ರಾಮೀಣ ಪೊಲೀಸ್ ಇಲಾಖೆಯ ಮೂವರು ಅಧಿಕಾರಿಗಳು — ಬುಡ್ನೆ, ಉಪ ವಿಭಾಗೀಯ ಪೊಲೀಸ್ ಇನ್ಸ್‌ಪೆಕ್ಟರ್ ಪಾಟೀಲ್ ಹಾಗೂ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಲಾಡ್‌ಪುತ್ರೆ — ತಮಗೆ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮ ಮೇಲೆ ನಡೆದ ಹಿಂಸೆ ಕುರಿತು ಕ್ರಮ ಕೈಗೊಳ್ಳಬೇಕೆಂದು ಆ ಪತ್ರದಲ್ಲಿ ವಿನಂತಿಸಿದ್ದರು.

ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದ್ದು, ಸಿಎಂ ದೇವೇಂದ್ರ ಫಡ್ನವೀಸ್ ಅವರ ಆದೇಶದ ಮೇರೆಗೆ ಆರೋಪಿಯನ್ನು ಅಮಾನತುಗೊಳಿಸಲಾಗಿದೆ.
ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿ, “ವೈದ್ಯೆಯ ಆತ್ಮಹತ್ಯೆಗೆ ಸರ್ಕಾರವೇ ಕಾರಣ. ಆಕೆ ಹಿಂದೆ ದೂರು ನೀಡಿದಾಗ ಕ್ರಮ ಕೈಗೊಳ್ಳಲಿಲ್ಲ. ಮಹಾಯುತಿ ಸರ್ಕಾರ ಪೊಲೀಸರನ್ನು ರಕ್ಷಿಸುತ್ತಿದ್ದು, ಅದೇ ದೌರ್ಜನ್ಯಕ್ಕೆ ಕಾರಣವಾಗಿದೆ,” ಎಂದು ಎಕ್ಸ್‌ನಲ್ಲಿ ಟೀಕಿಸಿದ್ದಾರೆ.

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ವೈದ್ಯೆಯ ಆತ್ಮಹತ್ಯೆಯ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

 

Related Posts