ಬ್ರಹ್ಮರಕೊಟ್ಲು ಟೋಲ್ ಶಾಶ್ವತ ಸ್ಥಗಿತಕ್ಕೆ ಒತ್ತಾಯ; ಇಲ್ಲವಾದರೆ ತೀವ್ರ ಹೋರಾಟದ ಎಚ್ಚರಿಕೆ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಮೊದಲೇ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕನಿಷ್ಠ 60 ಕಿಲೋ ಮೀಟರ್ ಅಂತರದಲ್ಲಿ ಮಾತ್ರ ಟೋಲ್ ಸಂಗ್ರಹ ಮಾಡಬೇಕು ಎಂಬ ನಿಯಮಕ್ಕೂ ಧಕ್ಕೆಯಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಅವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ಅನ್ನು ಬಂದ್ ಮಾಡಬೇಕೆಂದು ಜಿಲ್ಲೆಯ ಜನತೆ ದಶಕಗಳಿಂದ ಹೋರಾಟ ನಡೆಸುತ್ತಿದ್ದು, ಜನರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದೀಗ ಮತ್ತೊಂದು ಟೋಲ್ ಹೇರಲು ಮುಂದಾಗಿರುವುದು ಲೂಟಿ ಹಾಗೂ ಹಗಲು ದರೋಡೆಯ ತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.
ಮಂಗಳೂರು–ಬೆಂಗಳೂರು ನಡುವಿನ ಮಾರ್ಗದಲ್ಲಿ ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಗೇಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಜತ್ತೂರು ಟೋಲ್ ಸೇರಿಸಿದರೆ ಒಟ್ಟು ಏಳು ಟೋಲ್‌ಗಳಾಗಲಿವೆ. ಇದು ಸಾರ್ವಜನಿಕರ ಮೇಲೆ ಅನಗತ್ಯ ಆರ್ಥಿಕ ಭಾರ ಹಾಕುವ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಒಳಭಾಗದಲ್ಲಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ಅತ್ಯಂತ ಅವೈಜ್ಞಾನಿಕವಾಗಿದ್ದು, ಅದನ್ನು ಮೊದಲು ಶಾಶ್ವತವಾಗಿ ಸ್ಥಗಿತಗೊಳಿಸಬೇಕು. ಆ ಬಳಿಕವಷ್ಟೇ ಹೊಸ ಟೋಲ್ ಬಗ್ಗೆ ಚರ್ಚಿಸಬೇಕು ಎಂದು ಅನ್ವರ್ ಸಾದತ್ ಆಗ್ರಹಿಸಿದ್ದಾರೆ. ರಸ್ತೆ ಕಾಮಗಾರಿ ಇನ್ನೂ ನೂರಕ್ಕೆ ನೂರರಷ್ಟು ಪೂರ್ಣಗೊಂಡಿಲ್ಲದ ಸ್ಥಿತಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಜನಸಾಮಾನ್ಯರನ್ನು ಸಂಘಟಿಸಿ ಎಸ್‌ಡಿಪಿಐ ತೀವ್ರ ಪ್ರತಿರೋಧ ಒಡ್ಡಲಿದೆ ಎಂದು ಎಚ್ಚರಿಸಿದ್ದಾರೆ.
ಒಂದು ವೇಳೆ ಟೋಲ್ ಆರಂಭವಾದರೂ ಸ್ಥಳೀಯ ವಾಹನಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಬೇಕು ಎಂಬುದು ನಮ್ಮ ಕಟ್ಟುನಿಟ್ಟಿನ ಬೇಡಿಕೆಯಾಗಿದೆ. ಬಜತ್ತೂರು ಟೋಲ್ ಪ್ಲಾಜಾ ಆರಂಭಿಸುವ ಮುನ್ನ ಬ್ರಹ್ಮರಕೊಟ್ಲು ಟೋಲ್ ಅನ್ನು ತೆರವುಗೊಳಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ.

