ಟ್ರೋಫಿ ಅನಾವರಣದೊಂದಿಗೆ ‘ಹಿಲಾಲ್ ಟ್ರೋಫಿ – ಸೀಸನ್ 2’ಗೆ ವರ್ಣರಂಜಿತ ಚಾಲನೆ
ಸುಳ್ಯ, ಮೇ 2: ಸಂಪಾಜೆಯ ಹಿಲಾಲ್ ಕ್ಲಬ್ ಆಶ್ರಯದಲ್ಲಿ ಮೇ 3ರಂದು ಸಂಪಾಜೆ ಜೂನಿಯರ್ ಕಾಲೇಜ್ ಮೈದಾನದಲ್ಲಿ “ಹಿಲಾಲ್ ಟ್ರೋಫಿ – ಸೀಸನ್ 2” ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅದ್ಧೂರಿಯಾಗಿ ನಡೆಯಲಿದೆ.
ಸ್ಥಳೀಯ ಎಂಟು ತಂಡಗಳು ಭಾಗವಹಿಸುವ ಈ ಪಂದ್ಯಾಕೂಟವು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿ ಪರಿಣಮಿಸಲಿದೆ. ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಈ ಟೂರ್ನಮೆಂಟ್ ಗ್ರಾಮೀಣ ಪ್ರದೇಶದ ಕ್ರಿಕೆಟ್ ಪ್ರತಿಭೆಗಳಿಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆಯಿದೆ.
ಪಂದ್ಯಾಕೂಟದಲ್ಲಿ ಪ್ರಥಮ ಬಹುಮಾನವಾಗಿ ₹22,000 ಹಾಗೂ ಹಿಲಾಲ್ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹15,000 ಹಾಗೂ ಹಿಲಾಲ್ ಟ್ರೋಫಿ ನೀಡಲಾಗುತ್ತದೆ. ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೂ ಹಿಲಾಲ್ ಟ್ರೋಫಿ ಬಹುಮಾನವಾಗಿ ದೊರೆಯಲಿದೆ.
ಪಂದ್ಯ ಕೂಟದ ಮುಂದುವರಿದ ಭಾಗವಾಗಿ ಇಂದು ಸುಳ್ಯದಲ್ಲಿ ಪಂದ್ಯಾಕೂಟದ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳ ಟ್ರೋಫಿ ಅನಾವರಣ ಕಾರ್ಯಕ್ರಮ ನೆರವೇರಿತು. ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ ಹಾಗೂ ಯುಇಎ (UEA) ಸುಳ್ಯ ಝೋನ್ ಅಧ್ಯಕ್ಷರಾದ ಫೈಝಲ್ ಕಟ್ಟೆಕ್ಕಾರ್ ಅವರು ಟ್ರೋಫಿಗಳನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಕಿರ್ ಶೈನ್, ಇಕ್ಬಾಲ್ ಗೂನಡ್ಕ, ಶಫೀಕ್ ಸುಳ್ಯ, ರಿಯಾಝ್ ಕಲ್ಲುಗುಂಡಿ, ಅಮೀರ್ ಕಲ್ಲುಗುಂಡಿ, ಮಿರ್ಷಾದ್ ಕಲ್ಲುಗುಂಡಿ ಉಪಸ್ಥಿತರಿದ್ದರು. ಹಿಲಾಲ್ ಕ್ಲಬ್‌ನ ನಿರ್ದೇಶಕರಾದ ಉಮ್ಮರ್, ತಾಜ್, ಹಾರಿಸ್ ಸಿ.ಕೆ. ಹಾಗೂ ನೌಶಾದ್ ಕಲ್ಲುಗುಂಡಿ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಆಯೋಜಕರು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಈ ಕ್ರೀಡಾ ಉತ್ಸವವು ಯುವಜನರಲ್ಲಿ ಕ್ರೀಡಾಸಕ್ತಿ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ





m
