ಸುಳ್ಯ, ಜು. 20: ಸುಳ್ಯದ ಶಿವ ಹಾಲಿಡೇಸ್‌ಗೆ ಸೇರಿದ ವಾಹನವು ತಿರುಪತಿ ದರ್ಶನ ಮುಗಿಸಿ ಮರಳಿದ ಬಳಿಕ ತೊಳೆಯಲು (ವಾಷಿಂಗ್) ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ದುರ್ಗಾ ಸರ್ವಿಸ್ ಸ್ಟೇಷನ್‌ಗೆ ನೀಡಲಾಗಿತ್ತು.
ವಾಹನವನ್ನು ತೊಳೆಯುವ ವೇಳೆ ಅದರ ಸೀಟಿನ ಕೆಳಭಾಗದಲ್ಲಿ ₹12,000 ನಗದು ಹಾಗೂ ಕೆಲವು ಅಮೂಲ್ಯ ದಾಖಲೆಗಳು ಪತ್ತೆಯಾಗಿವೆ. ತಕ್ಷಣವೇ ಸರ್ವಿಸ್ ಸ್ಟೇಷನ್‌ನ ಸಿಬ್ಬಂದಿಗಳಾದ ಯೋಗೀಶ್ ಮತ್ತು ರಘುನಾಥ್ ಅವರು ಪ್ರಾಮಾಣಿಕತೆ ಮೆರೆದು ಶಿವ ಹಾಲಿಡೇಸ್‌ನ ಮಾಲೀಕರಾದ ಶಿವಪ್ರಸಾದ್ ಕೆ.ಜೆ. ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ನಗದು ಮತ್ತು ದಾಖಲೆಗಳನ್ನು ಅವರ ವಶಕ್ಕೆ ಒಪ್ಪಿಸಿದರು.
ನಂತರ ಶಿವಪ್ರಸಾದ್ ಅವರು ತಮ್ಮ ವಾಹನದಲ್ಲಿ ಪ್ರಯಾಣಿಸಿದ್ದ ಗಣೇಶ್ ಕಣಿಯೂರು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಈ ವೇಳೆ ಪ್ರಯಾಣಿಕ ಜಯರಾಮ್ ಅವರಿಗೆ ತಮ್ಮ ₹12,000 ನಗದು ಹಾಗೂ ದಾಖಲೆಗಳು ವಾಹನದಲ್ಲೇ ಕಳೆದುಹೋಗಿರುವುದು ಅರಿವಾಯಿತು.
ಬಳಿಕ ಶಿವಪ್ರಸಾದ್ ಅವರು ನಗದು ಹಾಗೂ ದಾಖಲೆಗಳನ್ನು ಜಯರಾಮ್ ಅವರಿಗೆ ಹಸ್ತಾಂತರಿಸಿದರು. ಸರ್ವಿಸ್ ಸ್ಟೇಷನ್ ಸಿಬ್ಬಂದಿಗಳಾದ ಯೋಗೀಶ್ ಮತ್ತು ರಘುನಾಥ್ ಅವರ ಪ್ರಾಮಾಣಿಕತೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.





m

