ಇತರೆ, ಕ್ರೀಡೆ, ಸ್ಥಳೀಯ

ಸುಳ್ಯ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿ ಸ್ಕೌಟ್ಸ್ & ಗೈಡ್ಸ್ ಮೇಳ ಮತ್ತು ಕಬ್, ಬುಲ್ ಬುಲ್ ಉತ್ಸವ ಕ್ಕೆ ಚಾಲನೆ

ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸ್ಕೌಟ್ಸ್ & ಗೈಡ್ಸ್ ಮತ್ತು ಕಬ್, ಬುಲ್ ಬುಲ್ ಉತ್ಸವಕ್ಕೆ ಚಾಲನೆಗೊಂಡಿದೆ

ಏನಿದು ? ಭಾರತ್ ಸ್ಕೌಟ್ಸ್ & ಗೈಡ್ಸ್

ಮಕ್ಕಳು ಹಾಗೂ ಯುವಕರ ಸರ್ವಾಂಗೀಣ ವ್ಯಕ್ತಿತ್ವ ವಿಕಸನವನ್ನು ಗುರಿಯಾಗಿಸಿಕೊಂಡಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ದೇಶದ ಪ್ರಮುಖ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 1950ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ನವದೆಹಲಿಯನ್ನು ಮುಖ್ಯ ಕಚೇರಿಯಾಗಿ ಹೊಂದಿದ್ದು, ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ತನ್ನ ಚಟುವಟಿಕೆಗಳ ಮೂಲಕ ರೂಪಿಸುತ್ತಿದೆ.
ಶಿಸ್ತು, ನಾಯಕತ್ವ ಮತ್ತು ಸೇವಾಭಾವವನ್ನು ಬೆಳೆಸುವುದರ ಜೊತೆಗೆ ದೇಶಭಕ್ತಿ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ದೈಹಿಕ, ಮಾನಸಿಕ ಮತ್ತು ನೈತಿಕ ಅಭಿವೃದ್ಧಿಗೆ ಒತ್ತು ನೀಡುವ ಈ ಸಂಸ್ಥೆ ಶಿಬಿರಗಳು, ಸೇವಾ ಕಾರ್ಯಗಳು ಹಾಗೂ ವಿವಿಧ ತರಬೇತಿಗಳ ಮೂಲಕ ಜೀವನ ಕೌಶಲ್ಯಗಳನ್ನು ಕಲಿಸುತ್ತಿದೆ.
ಸಮಾಜ ಸೇವೆ, ವಿಪತ್ತು ನಿರ್ವಹಣೆ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭಾರತ್ ಸ್ಕೌಟ್ಸ್ & ಗೈಡ್ಸ್ ಯುವ ಪೀಳಿಗೆಯನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿಧ್ಯಾರ್ಥಿಗಳು, ಯುವ ಸಮಾಜ ಮಾತ್ರವಲ್ಲದೆ ಸಮಾಜ ಸೇವಕರು ಇದರ ಸದಸ್ಯತ್ವ ಪಡೆಯಬಹುದು

ಸುಳ್ಯದಲ್ಲಿ ನಡೆದ ಕಾರ್ಯಕ್ರಮದ ವರದಿ

ಕಾರ್ಯಕ್ರಮದ ಅಂಗವಾಗಿ ಸುಳ್ಯ ಶಾಸ್ತ್ರಿ ಸರ್ಕಲ್‌ನಿಂದ ಸುಳ್ಯ ತಾಲೂಕಿನ ವಿವಿಧ ಶಾಲೆಗಳ ಸುಮಾರು 450ಕ್ಕೂ ಅಧಿಕ ಸಮವಸ್ತ್ರಧಾರಿ ವಿದ್ಯಾರ್ಥಿಗಳ ರ್ಯಾಲಿ ನಡೆಯಿತು. ರ್ಯಾಲಿಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಶಿಸ್ತು, ಸಾರ್ವಜನಿಕ ಶಿಸ್ತುಪಾಲನೆ ಹಾಗೂ ರಸ್ತೆ ಸುರಕ್ಷತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ರ್ಯಾಲಿಯಲ್ಲಿ ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ನಂತರ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಗ್ರೀನ್ ವ್ಯೂ ಸಂಚಾಲಕ ಹಾಗೂ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಸುಳ್ಯ ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಗ್ರೀನ್ ವ್ಯೂ ಶಾಲಾ ಸಂಯೋಜಕರಾದ ಕೆ.ಎಸ್. ಉಮ್ಮರ್ ಹಾಗೂ ಶಾಫಿ ಕುತ್ತಾಮೊಟ್ಟೆ, ನಿರ್ದೇಶಕರಾದ ಸಾಲಿ ಕಟ್ಟೆಕ್ಕಾರ್ಸ್, ವರ್ತಕರ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಮೀದ್, ಮುಖ್ಯ ಶಿಕ್ಷಕ ಇಲ್ಯಾಸ್ ಕೆ. ಕಾಶಿಪಟ್ಟಣ ಜನತಾ, ಸ್ಕೌಟ್ಸ್ & ಗೈಡ್ಸ್ ಪದಾಧಿಕಾರಿಗಳಾದ ರಾಜು ಪಂಡಿತ್, ಮಾಧವ ಮಾಸ್ಟರ್, ಪ್ರೇಮಲತಾ ಎಚ್. ಮೊದಲಾದವರು ಉಪಸ್ಥಿತರಿದ್ದರು.

ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ಅಧ್ಯಕ್ಷ ಶಶಿಧರ್ ಎಂ.ಜೆ. ಸ್ವಾಗತಿಸಿ ವಿಷಯ ಪ್ರಸ್ತಾವನೆ ನೀಡಿದರು. ಉತ್ಸವದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾಭಾವನೆ, ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಬೆಳೆಸುವ ಉದ್ದೇಶವನ್ನು ವಕ್ತಾರರು ವಿವರಿಸಿದರು.

Related Posts