ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ ಯುವತಿಯ ತಾಯಿ !..
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ಪ್ರದೇಶದಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯತೀಶ್ ಅರ್ವಾರ್ ಅವರ ಸಹೋದರ ಹರೀಶ್ ಅವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಪುತ್ರಿ ಧೃತಿ ಎಂದು ಗುರುತಿಸಲಾಗಿದೆ. ಮಧುಶ್ರೀ ಅವರು ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ರುಕ್ಕಯ್ಯ ಗೌಡ ಮತ್ತು ರತ್ನಾವತಿ ದಂಪತಿಯ ಪುತ್ರಿಯಾಗಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಮಧುಶ್ರೀ ಅವರು ಮನೆಯವರೊಂದಿಗೆ ಊಟ ಮುಗಿಸಿ ಮಲಗಿದ್ದರು. ಆದರೆ ಬೆಳಗ್ಗೆ ಎದ್ದಾಗ ತಾಯಿ ಹಾಗೂ ಮಗು ಮನೆಯಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಟ ನಡೆಸಿದ ವೇಳೆ, ಸಮೀಪದ ಬಾವಿಯಲ್ಲಿ ತಾಯಿ–ಮಗುವಿನ ಶವಗಳು ಪತ್ತೆಯಾಗಿವೆ.
ಎಲ್ಲರೂ ನಿದ್ದೆಯಲ್ಲಿದ್ದ ಸಮಯದಲ್ಲಿ ಮಧುಶ್ರೀ ಅವರು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ, ಮಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಮೃತಳ ತಾಯಿ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ಆಧರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮನೆಯವರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


