“ಸಹಕಾರ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದ ಮಾದರಿ ಗ್ರಾಮ ನಿರ್ಮಾಣ”:- ಶಾಸಕಿ ಭಾಗೀರಥಿ ಮುರುಳ್ಯ
ಅರಂತೋಡು, ಫೆ.12: ಅರಂತೋಡು ಗ್ರಾಮಪಂಚಾಯತಿ ವತಿಯಿಂದ ಜಲ್ ಅರ್ಪಣ್ ದಿವಸ್‌ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (ರೆಕಾರ್ಡ್ ರೂಮ್)ಗಳ ಉದ್ಘಾಟನೆ ಕಾರ್ಯಕ್ರಮವೂ ನೆರವೇರಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಯಲ್ಲಿ ಕಲಿಕಾ ಕೇಂದ್ರ, ಗ್ರಂಥಾಲಯ ಮತ್ತು ಜಿಮ್‌ನಂತಹ ಸೌಲಭ್ಯಗಳನ್ನು ಒದಗಿಸಿರುವುದು ಶ್ಲಾಘನೀಯವಾಗಿದೆ ಎಂದರು. ಈ ಸೌಲಭ್ಯಗಳು ಗ್ರಾಮಸ್ಥರಿಗೆ ಜ್ಞಾನಾರ್ಜನೆ, ಮನರಂಜನೆ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿವೆ ಎಂದು ಹೇಳಿದರು.
ಮಹಿಳೆಯರು ಮತ್ತು ಯುವಕರಿಗೆ ವಿವಿಧ ಸಂಘಟನೆಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಸೃಷ್ಟಿಸಲಾಗಿದ್ದು, ಇದು ಅವರ ಮಾನಸಿಕ ಆರೋಗ್ಯ ಸುಧಾರಣೆಗೂ ಹಾಗೂ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕಿಯಾಗಿ ತಮ್ಮ ವಿಧಾನಸಭಾ ಕ್ಷೇತ್ರಗಳಾದ ಕಡಬ ಮತ್ತು ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದೇನೆ ಎಂದು ತಿಳಿಸಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು ಹಾಗೂ ನಾಗರಿಕರು ಒಟ್ಟಾಗಿ ಕೈಜೋಡಿಸಿದರೆ ಮಾದರಿ ಗ್ರಾಮ ಹಾಗೂ ತಾಲೂಕನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


