ಸುಳ್ಯ: ಪ್ರಾಮಾಣಿಕತೆಗೆ ಮಾದರಿಯಾಗುವ ಘಟನೆಯೊಂದು ಸುಳ್ಯ ಪಟ್ಟಣದ ಗಾಂಧಿನಗರದಲ್ಲಿ ನಡೆದಿದೆ. ಗಾಂಧಿನಗರ ಜುಮ್ಮಾ ಮಸೀದಿ ಬಳಿ ನಮಾಜ್ ನೆರವೇರಿಸಿ ಹೊರಬರುತ್ತಿದ್ದ ವೇಳೆ ಕಲ್ಕತ್ತಾ ಮೂಲದ ಕಾರ್ಪೆಂಟರ್ ಮೆಹರಾಜ್ ಅವರಿಗೆ ₹50 ಸಾವಿರ ರೂಪಾಯಿ ನೋಟಿನ ಕಟ್ಟೊಂದು ಬಿದ್ದ ಸ್ಥಿತಿಯಲ್ಲಿ ಸಿಕ್ಕಿದೆ.
ತಕ್ಷಣವೇ ವಿಷಯವನ್ನು ಸುತ್ತಮುತ್ತಲಿನವರಿಗೆ ತಿಳಿಸಿದ ಮೆಹರಾಜ್, ಹಣದ ನಿಜವಾದ ವಾರೀಸುದಾರರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದರು. ಬಳಿಕ ಆ ಮೊತ್ತವನ್ನು ಅದರ ಮಾಲೀಕರಾದ ಎಂ.ಎ. ಬಶೀರ್ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು.
ಮೆಹರಾಜ್ ಅವರ ಈ ಪ್ರಾಮಾಣಿಕ ಕೃತ್ಯವನ್ನು ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ರಮಝಾನ್ ತಿಂಗಳ ಪವಿತ್ರ 27ನೇ ದಿನದಲ್ಲಿ ಇಂತಹ ಸತ್ಕರ್ಮಗಳು ಎಲ್ಲರಿಗೂ ಮಾದರಿಯಾಗಿದ್ದು, ಪುಣ್ಯ ಕಾರ್ಯಗಳು ದೇವರ ಸಂತೃಪ್ತಿಗೆ ಪಾತ್ರವಾಗುತ್ತವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್ ಉಪಸ್ಥಿತರಿದ್ದರು


