ಮುಂಬೈ, ಜೂನ್ 2: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಾರ್ಶಿಯಲ್ಲಿ ನಡೆಯುತ್ತಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಕ್ರಿಕೆಟ್ ಪಿಚ್ ಸಮತಟ್ಟು ಮಾಡಲು ಬಳಸುವ ಭಾರಿ ತೂಕದ ರೋಲರ್ ಅಡಿಗೆ ಸಿಲುಕಿ ಬಾಲಕ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಮೃತ ಬಾಲಕನನ್ನು ಆರವ್ ಅಲಿಯಾಸ್ ವಿರೇನ್ ಚೌಧರಿ ಎಂದು ಗುರುತಿಸಲಾಗಿದೆ. ಮೇ 30ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ತರಬೇತಿ ಶಿಬಿರದಲ್ಲಿ ಪಿಚ್ ಸಮತಟ್ಟು ಮಾಡಲು 12ರಿಂದ 15 ಮಕ್ಕಳಿಗೆ ಕೋಚ್‌ಗಳು ಸೂಚನೆ ನೀಡಿದ್ದರು. ಅದರಂತೆ ಮಕ್ಕಳು ಸೇರಿ ಭಾರೀ ತೂಕದ ರೋಲರ್ ಅನ್ನು ಎಳೆಯುತ್ತಿದ್ದ ವೇಳೆ ಆರವ್ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ರೋಲರ್ ಆತನ ದೇಹದ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.
ತಕ್ಷಣ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಂದೆ ಗಂಭೀರ ಆರೋಪ ಮಾಡಿದ್ದು, ಮಕ್ಕಳಿಂದ ಇಷ್ಟು ಭಾರವಾದ ರೋಲರ್ ಎಳೆಯಿಸುವ ಸಂದರ್ಭದಲ್ಲಿ ಯಾವುದೇ ಹಿರಿಯ ಮೇಲ್ವಿಚಾರಕರು ಅಥವಾ ಕೋಚ್‌ಗಳು ಸ್ಥಳದಲ್ಲಿ ಇರಲಿಲ್ಲ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಇಬ್ಬರು ತರಬೇತುದಾರರು (ಕೋಚ್‌ಗಳು) ಹಾಗೂ ಸ್ಥಳೀಯ ಕ್ರಿಕೆಟ್ ಅಸೋಸಿಯೇಷನ್ ಸೇರಿದಂತೆ ಎರಡು ಸಂಸ್ಥೆಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ದುರಂತವು ಕ್ರೀಡಾ ತರಬೇತಿ ಶಿಬಿರಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆಯ ಅಗತ್ಯತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ





m
