ಚಿಂತಾಮಣಿ, ಜೂನ್ 20: ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಒಂದಾದ ಮಾವಿನ ಬೆಲೆ ಸತತ ಎರಡನೇ ವರ್ಷವೂ ಪಾತಾಳಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಲ್ಪ ದರದಿಂದ ಕೊಯ್ಲು ವೆಚ್ಚವೂ ಮರಳದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಬೆಂಬಲ ಬೆಲೆ ಘೋಷಿಸಿ ಪ್ರೋತ್ಸಾಹ ಧನ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ, ಈ ವರ್ಷ ಮಾವಿನ ಇಳುವರಿ ಕಳೆದ ವರ್ಷಕ್ಕಿಂತ ಶೇ. 30ರಿಂದ 40ರಷ್ಟು ಹೆಚ್ಚಾಗಿದೆ. ಆದರೆ ಅಧಿಕ ಉತ್ಪಾದನೆಯ ನಡುವೆಯೇ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಹೆಚ್ಚು ಇಳುವರಿ ನೀಡುವ ತಳಿಗಳು ಪ್ರತಿ ಕೆ.ಜಿಗೆ ಕೇವಲ ₹4ರಿಂದ ₹6ರವರೆಗೆ ಮಾತ್ರ ಮಾರಾಟವಾಗುತ್ತಿವೆ. ಇದರಿಂದ ಕೊಯ್ಲು, ಸಾಗಣೆ ಹಾಗೂ ಕಾರ್ಮಿಕ ವೆಚ್ಚವೂ ವಾಪಸ್ ಸಿಗದ ಕಾರಣ ಅನೇಕ ರೈತರು ಹಣ್ಣುಗಳನ್ನು ಮರಗಳಲ್ಲೇ ಬಿಟ್ಟಿದ್ದಾರೆ. ಮಳೆ ಆರಂಭವಾಗಿರುವುದರಿಂದ ತೋಟಗಳಲ್ಲೇ ಉಳಿದಿರುವ ಹಣ್ಣುಗಳು ಕೊಳೆಯುವ ಹಾಗೂ ಹುಳು ಬಾಧೆ ಉಂಟಾಗುವ ಆತಂಕ ರೈತರಲ್ಲಿ ಹೆಚ್ಚಾಗಿದೆ.
ಚಿಂತಾಮಣಿ–ಶ್ರೀನಿವಾಸಪುರವೇ ಮಾವಿನ ಮಡಿಲು
ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ಮಾವಿನ ಪೈಕಿ ಸುಮಾರು ಶೇ.40ರಷ್ಟು ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತದೆ. ಈ ಕಾರಣದಿಂದ ಈ ಭಾಗವನ್ನು “ಮಾವಿನ ಮಡಿಲು” ಎಂದೇ ಕರೆಯಲಾಗುತ್ತದೆ. ಇಲ್ಲಿನ ರೈತರು ತೋತಾಪುರಿ, ಬೆನಿಷಾ, ಬಾದಾಮಿ, ಮಲ್ಲಿಕಾ, ರಸಪುರಿ ಸೇರಿದಂತೆ ವಿವಿಧ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಪ್ರಸ್ತುತ ಬಾದಾಮಿ ಕೆ.ಜಿಗೆ ₹25, ಮಲ್ಲಿಕಾ ಹಾಗೂ ರಸಪುರಿ ₹15ರಿಂದ ₹20 ದರ ಸಿಗುತ್ತಿದ್ದರೆ, ತೋತಾಪುರಿ, ಸೇಂಧೂರ ಹಾಗೂ ಬೆನಿಷಾ ತಳಿಗಳು ಕೇವಲ ₹4ರಿಂದ ₹6ಕ್ಕೆ ಸಗಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.
ತೋಟ ಖರೀದಿಸಿದ ವ್ಯಾಪಾರಿಗಳಿಗೂ ಸಂಕಷ್ಟ
ಡಿಸೆಂಬರ್ ಹಾಗೂ ಜನವರಿಯಲ್ಲಿ ಉತ್ತಮ ಫಸಲು ನಿರೀಕ್ಷಿಸಿ ತೋಟಗಳನ್ನು ಮುಂಗಡವಾಗಿ ಖರೀದಿಸಿದ್ದ ವ್ಯಾಪಾರಿಗಳಿಗೂ ಭಾರಿ ನಷ್ಟವಾಗಿದೆ. ಕಳೆದ ಎರಡು ವಾರಗಳಲ್ಲಿ ದರ ದಿಢೀರ್ ಕುಸಿದ ಪರಿಣಾಮ ಹಲವರು ತೋಟಗಳತ್ತ ಸುಳಿಯದೆ ದೂರ ಉಳಿದಿದ್ದಾರೆ.
ಸಗಟು ದರ ಕುಸಿತ, ಚಿಲ್ಲರೆ ದರ ಮಾತ್ರ ಯಥಾಸ್ಥಿತಿ
ಸಗಟು ಮಾರುಕಟ್ಟೆಯಲ್ಲಿ ಬೆಲೆ ಗಣನೀಯವಾಗಿ ಇಳಿದಿದ್ದರೂ ಅದರ ಲಾಭ ಗ್ರಾಹಕರಿಗೆ ತಲುಪಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬಾದಾಮಿ ಹಾಗೂ ಮಲ್ಲಿಕಾ ಕೆ.ಜಿಗೆ ₹80, ರಸಪುರಿ ₹60–₹70 ಹಾಗೂ ಬೆನಿಷಾ ₹40–₹50ಕ್ಕೆ ಮಾರಾಟವಾಗುತ್ತಿದೆ.
ಪ್ರೋತ್ಸಾಹ ಧನಕ್ಕೆ ಸರ್ಕಾರಕ್ಕೆ ಪ್ರಸ್ತಾವ
“ಮಾರುಕಟ್ಟೆಯಲ್ಲಿ ಮಾವಿನ ದರ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಪ್ರೋತ್ಸಾಹ ಧನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ” ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ದೇವರಾಜ್ ತಿಳಿಸಿದ್ದಾರೆ.
ಹಾಕಿದ ಬಂಡವಾಳವೂ ಬರುತ್ತಿಲ್ಲ’
ಒಂದು ಎಕರೆ ಮಾವಿನ ತೋಟದಲ್ಲಿ ಉಳುಮೆ, ಗೊಬ್ಬರ, ನೀರಾವರಿ, ಔಷಧ ಹಾಗೂ ಕಾವಲು ಸೇರಿದಂತೆ ₹30 ಸಾವಿರದಿಂದ ₹40 ಸಾವಿರವರೆಗೆ ವೆಚ್ಚವಾಗುತ್ತದೆ. ಆದರೆ ಈ ಬಾರಿ ಆ ಬಂಡವಾಳವೂ ವಾಪಸ್ ಸಿಗುತ್ತಿಲ್ಲ. ಸಾಲದ ಸುಳಿಗೆ ಸಿಲುಕಿದ್ದೇವೆ. ಸರ್ಕಾರ ತಕ್ಷಣ ನೆರವಿಗೆ ಬರಬೇಕು ಎಂದು ಮಾವು ಬೆಳೆಗಾರ ಎನ್. ನಾಗಿರೆಡ್ಡಿ ಮನವಿ ಮಾಡಿದ್ದಾರೆ.
ದರ ಕುಸಿತಕ್ಕೆ ಕಾರಣವೇನು?
ಇಸ್ರೇಲ್–ಇರಾನ್–ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಈ ಬಾರಿ ಮಾವಿನ ರಫ್ತು ಕಡಿಮೆಯಾಗಿದೆ. ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಂದೇ ಸಮಯದಲ್ಲಿ ಕೊಯ್ಲು ನಡೆದಿರುವುದು ಹಾಗೂ ಮಳೆಯಿಂದ ಹಣ್ಣಿನ ಗುಣಮಟ್ಟ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.




m
