Featured, ಅಂಕಣ, ಸ್ಥಳೀಯ

ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ಉನ್ನತ ಮಟ್ಟದ ಸಂಪರ್ಕದ ಶಂಕೆ: ಕೇಜ್ರಿವಾಲ್ ಆರೋಪ

ಅಯೋಧ್ಯೆ, ಜೂನ್ 26: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೆಳ ಹಂತದ ಸಿಬ್ಬಂದಿಯನ್ನು ಮಾತ್ರ ಬಂಧಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂತಹ ದೊಡ್ಡ ಪ್ರಮಾಣದ ಅಕ್ರಮವನ್ನು ಕೆಳ ಹಂತದ ಸಿಬ್ಬಂದಿ ಮಾತ್ರ ದೀರ್ಘಕಾಲ ನಡೆಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳಿಕ ಹನುಮಾನ್ ಮಂದಿರಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಅರ್ಚಕರಿಂದ ಆಶೀರ್ವಾದ ಪಡೆದರು.

“ರಾಮ ಮಂದಿರದಲ್ಲಿ ದೇಶದ ಜನರ ಸುಖ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದೇವೆ. ಆದರೆ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಕೇವಲ ಮೇಲ್ನೋಟದ ಕ್ರಮದಂತಿದೆ. ಪ್ರಕರಣದಲ್ಲಿ ಎಂಟು ಕೆಳ ಹಂತದ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅಕ್ರಮವನ್ನು ಅವರು ಮಾತ್ರ ದೀರ್ಘಕಾಲ ನಡೆಸಲು ಸಾಧ್ಯವಿಲ್ಲ. ಇದರ ಹಿಂದೆ ಉನ್ನತ ಮಟ್ಟದ ಸಂಪರ್ಕ ಇರುವ ಸಾಧ್ಯತೆ ಸ್ಪಷ್ಟವಾಗಿದೆ. ಕೆಳ ಹಂತದ ಸಿಬ್ಬಂದಿಯನ್ನು ಬಲಿಪಶುಗಳನ್ನಾಗಿ ಮಾಡಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಕೇಜ್ರಿವಾಲ್ ಆರೋಪಿಸಿದರು.

ಪ್ರಕರಣದ ಹಿನ್ನೆಲೆ:-

ರಾಮ ಮಂದಿರದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ, ನಗದು ಹಾಗೂ ಆಭರಣಗಳು ಕಾಣೆಯಾಗಿರುವ ಕುರಿತು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ಕೈಗೊಳ್ಳಲಾಯಿತು.

ಎಸ್‌ಐಟಿ ತನ್ನ 20 ಪುಟಗಳ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಟ್ರಸ್ಟ್ ಹಾಗೂ ಬ್ಯಾಂಕ್‌ಗೆ ಸಂಬಂಧಿಸಿದ ಶಂಕಿತರು ಸೇರಿ ಸುಮಾರು 150 ಮಂದಿಯನ್ನು ವಿಚಾರಣೆ ನಡೆಸಿದೆ. ಅಲ್ಲದೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪುನರ್‌ರಚನೆ ಸೇರಿದಂತೆ ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಈ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರು ಯಾರು?

ಪ್ರಕರಣ ದಾಖಲಾಗಿದ ಕೆಲವೇ ಗಂಟೆಗಳಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ್ ಶಂಕರ್ ಯಾದವ್ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಅಪರಿಚಿತ ವ್ಯಕ್ತಿಗಳನ್ನೂ ಆರೋಪಿಗಳಾಗಿ ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ಕಳ್ಳತನ, ನಂಬಿಕೆ ದ್ರೋಹ, ಕದ್ದ ಆಸ್ತಿಯನ್ನು ಸ್ವೀಕರಿಸುವುದು ಅಥವಾ ಮರೆಮಾಚುವುದು, ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ವಿವಿಧ ಕಲಂಗಳಡಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

m

Related Posts