Featured, ಇತರೆ, ಸ್ಥಳೀಯ

ದಿವಂಗತ, ಗಾಳಿಮುಖ ಅಬ್ದುಲ್ ಖಾದರ್ ಹಾಜಿ ನೆನೆಪಿಗಾಗಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಿಕೊಟ್ಟ ಜಿ ಎ ಕುಟುಂಬ

ಒಬ್ಬ ಮನುಷ್ಯನ ಬದುಕಿಗೆ ನಿಜವಾದ ಅರ್ಥ ನೀಡುವುದು ಅವನು ಸಂಪಾದಿಸಿದ ಸಂಪತ್ತು ಅಲ್ಲ; ಅವನು ಸಮಾಜಕ್ಕೆ ಬಿಟ್ಟುಹೋಗುವ ಸೇವೆ, ಮಾನವೀಯತೆ ಮತ್ತು ಸತ್ಕಾರ್ಯಗಳು

ಬರಹ : ರಶೀದ್ ಜಟ್ಟಿಪಳ್ಳ

ಸುಳ್ಯ: ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಿ.ಎ ಕುಟುಂಬದ ವತಿಯಿಂದ ಸ್ಮಾರ್ಟ್ ಕ್ಲಾಸ್ ನಿರ್ಮಿಸಿ ಕೊಡುಗೆಯಾಗಿ ನೀಡಲಾಯಿತು.
ದಿವಂಗತ ಕೆ.ಪಿ. ಅಬ್ದುಲ್ ಖಾದರ್ ಹಾಜಿ ಗಾಳಿಮುಖ ಅವರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರ್ಟ್ ಕ್ಲಾಸ್‌ನಲ್ಲಿ ಪೀಠೋಪಕರಣಗಳು, ಟಿ.ವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಖತಮ್ಮುಲ್ ಖುರಾನ್ ಪಾರಾಯಣದೊಂದಿಗೆ ಉದ್ಘಾಟನೆ ನೆರವೇರಿತು.
ಗಾಂಧಿನಗರ ಜುಮ್ಮಾ ಮಸೀದಿಯ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಈ ಕೊಡುಗೆ ಶ್ಲಾಘನೀಯವಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ ಎಂದರು. ಜಿ.ಎ ಕುಟುಂಬದ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಸೀದಿ-ಮದರಸ ಆಡಳಿತ ಸಮಿತಿ ಪದಾಧಿಕಾರಿಗಳು, ಗಣ್ಯರು, ಜಿ.ಎ ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಜಿ.ಎ ಕುಟುಂಬದ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.

ಸಮಾಜ ಸೇವೆಯೇ ಬದುಕಿನ ಸಾರ್ಥಕತೆ: ದಿವಂಗತ ಕೆ.ಪಿ. ಅಬ್ದುಲ್ ಖಾದರ್ ಹಾಜಿಯವರ ಸೇವಾ ಪರಂಪರೆಗೆ ಶಾಶ್ವತ ರೂಪ

ಸುಳ್ಯ: ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ… ನನ್ನ ತಂದೆಯವರಾದ ದಿವಂಗತ ಡಿಲಕ್ಸ್ ಮಮ್ಮುಚ್ಚ ಅವರು ಸುಳ್ಯದಲ್ಲಿ ಫೈವ್‌ಸ್ಟಾರ್ ಹೋಟೆಲ್ ನಡೆಸುತ್ತಿದ್ದ ಕಾಲವದು. ಆಗ ನಾನು ಚಿಕ್ಕವನಾಗಿದ್ದರೂ, ತಂದೆಯವರಿಗೆ ನೆರವಾಗುತ್ತ ಹೆಚ್ಚಿನ ಸಮಯವನ್ನು ಹೋಟೆಲ್‌ನಲ್ಲೇ ಕಳೆಯುತ್ತಿದ್ದೆ.
ಆ ಸಂದರ್ಭದಲ್ಲಿ ನನ್ನ ತಂದೆಯವರಿಗೆ ಅತ್ಯಂತ ಆಪ್ತವಾಗಿದ್ದ ಹಿರಿಯ ಸ್ನೇಹಿತರ ಒಂದು ಬಳಗವಿತ್ತು. ಆ ಬಳಗದಲ್ಲಿ ದಿವಂಗತ ಕೆ.ಪಿ. ಅಬ್ದುಲ್ ಖಾದರ್ ಹಾಜಿ ಗಾಳಿಮುಖ, ದಿವಂಗತ ಮೈಲ್ಗಲ್ ಮಹಮ್ಮದ್, ಬಾರಬಾರ್ ಅಬೂಬಕ್ಕರ್ ಹಾಗೂ ಇಂದಿಗೂ ನಮ್ಮೊಂದಿಗೆ ಇರುವ ಹಿರಿಯ ವ್ಯಕ್ತಿತ್ವ ಇಸಾಕ್ ಹಾಜಿ ಪಾಜಪಳ್ಳ ಸೇರಿದಂತೆ ಇನ್ನೂ ಹಲವು ಗಣ್ಯರು ಇದ್ದರು. ಉಳಿದ ಕೆಲವರ ಹೆಸರುಗಳು ಇಂದು ನೆನಪಿಗೆ ಬರುತ್ತಿಲ್ಲ.
ಅದು ಕೇವಲ ಸ್ನೇಹಿತರಾಗಿ ಸೇರಿ ಸಮಯ ಕಳೆಯುತ್ತಿದ್ದ ಬಳಗವಾಗಿರಲಿಲ್ಲ. ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿದ್ದ, ಜನರ ವಿಶ್ವಾಸ ಗಳಿಸಿದ್ದ ಒಂದು ಮಾದರಿ ಸ್ನೇಹ ಬಳಗವಾಗಿತ್ತು. ಆ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದ ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಈ ಹಿರಿಯರು ಪ್ರಮುಖ ಪಾತ್ರ ವಹಿಸುತ್ತಿದ್ದರು.
ಕೌಟುಂಬಿಕ ಕಲಹಗಳು, ಆಸ್ತಿ ವಿವಾದಗಳು, ಸಾಮಾಜಿಕ ವ್ಯಾಜ್ಯಗಳು, ಮಸೀದಿ–ಮದರಸಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಮದುವೆ ವಿಚಾರಗಳು ಸೇರಿದಂತೆ ಹಲವು ಭಿನ್ನಾಭಿಪ್ರಾಯಗಳನ್ನು ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಪರಸ್ಪರ ಮಾತುಕತೆ ಹಾಗೂ ಪಂಚಾಯಿತಿ ಮೂಲಕ ಸೌಹಾರ್ದಯುತವಾಗಿ ಬಗೆಹರಿಸುತ್ತಿದ್ದರು. ಇದರಿಂದ ಸಮಾಜದಲ್ಲಿ ಶಾಂತಿ, ಐಕ್ಯತೆ ಮತ್ತು ಪರಸ್ಪರ ವಿಶ್ವಾಸ ಬಲಗೊಳ್ಳುತ್ತಿತ್ತು.
ಈ ಹಿರಿಯರ ಸಾಮಾಜಿಕ ಚಟುವಟಿಕೆಗಳು ಕೇವಲ ಸುಳ್ಯ ತಾಲೂಕಿಗೆ ಸೀಮಿತವಾಗಿರಲಿಲ್ಲ. ಸುಮಾರು 1970ರಿಂದ 1985ರ ಅವಧಿಯಲ್ಲಿ ಸಮಾಜ, ಸಮುದಾಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಂದಿನ ಮುಖ್ಯಮಂತ್ರಿಗಳೊಂದಿಗೂ ಈ ಹಿರಿಯರಿಗೆ ಆತ್ಮೀಯ ಸಂಪರ್ಕವಿತ್ತು ಎನ್ನುವುದು ಅವರ ಸಾಮಾಜಿಕ ಗೌರವ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿತ್ತು.

ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಅಬ್ದುಲ್ ಖಾದರ್ ಹಾಜಿ

ಈ ಸ್ನೇಹ ಬಳಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಪ್ರಮುಖ ವ್ಯಕ್ತಿತ್ವ ದಿವಂಗತ ಕೆ.ಪಿ. ಅಬ್ದುಲ್ ಖಾದರ್ ಹಾಜಿ ಗಾಳಿಮುಖ. ಸಮುದಾಯ ಮತ್ತು ಸಮಾಜ ಸೇವೆಯನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದ ಅವರು, ಸಂಪಾದನೆಯ ಸಾರ್ಥಕತೆಯನ್ನು ಸಮಾಜಕ್ಕೆ ಮರಳಿ ನೀಡುವುದರಲ್ಲೇ ಕಂಡವರು. ಆ  ಕಾಲದಲ್ಲಿ ಅಬ್ದುಲ್ ಖಾದರ್ ಹಾಜಿಯವರ ಬಳಿ ಅಂಬಾಸಿಡರ್ ಕಾರೊಂದಿತ್ತು. ಆ ಕಾರು ಅವರ ವೈಯಕ್ತಿಕ ಬಳಕೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅಗತ್ಯವಿರುವವರ ನೆರವಿಗೆ, ತುರ್ತು ಸಂದರ್ಭಗಳಲ್ಲಿ ಜನರ ಸೇವೆಗೆ ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸದಾ ಸಿದ್ಧವಾಗಿರುತ್ತಿತ್ತು.
ಇಂಧನದ ಖರ್ಚು, ಸಮಯ ಅಥವಾ ಪ್ರಯಾಣದ ದೂರ ಯಾವುದನ್ನೂ ಲೆಕ್ಕಿಸದೆ ಅಗತ್ಯವಿರುವವರಿಗೆ ನೆರವಾಗುವುದು ಅವರ ಸಹಜ ಗುಣವಾಗಿತ್ತು. ಯಾರಿಗಾದರೂ ಕಷ್ಟ ಎದುರಾದಾಗ, ಸಾಧ್ಯವಾದಷ್ಟು ನೆರವು ನೀಡಲು ಮುಂದಾಗುತ್ತಿದ್ದರು. ಟಿಂಬರ್ ವ್ಯಾಪಾರಿಯಾಗಿದ್ದ ಅವರು ತಮ್ಮ ಪರಿಶ್ರಮದಿಂದ ಗಳಿಸಿದ ಸಂಪಾದನೆಯ ಒಂದು ಭಾಗವನ್ನು ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಮೀಸಲಿಡುತ್ತಿದ್ದರು. ಸಹಾಯಕ್ಕಾಗಿ ಅವರ ಬಳಿಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸುವ ಮನೋಭಾವ ಅವರದ್ದಾಗಿರಲಿಲ್ಲ.
ಅವರ ದಾನಧರ್ಮ ಕೇವಲ ಹಣಕಾಸಿನ ನೆರವಿಗೆ ಸೀಮಿತವಾಗಿರಲಿಲ್ಲ. ಸಮಯ, ಶ್ರಮ, ವಾಹನ, ಸಂಪರ್ಕ, ಸಾಮರ್ಥ್ಯ—ತಮ್ಮಲ್ಲಿದ್ದ ಎಲ್ಲವನ್ನೂ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾನವೀಯತೆಯ ದೃಷ್ಟಿಯಿಂದ ನೆರವಾಗುತ್ತಿದ್ದ ಅವರ ಸೇವಾ ಮನೋಭಾವ ನಿಜಕ್ಕೂ ಅಪರೂಪದ್ದು. ತಮ್ಮ ಸಂಪಾದನೆಯ ಮೂಲಕ ಸಮಾಜಕ್ಕೆ ಮರಳಿ ಕೊಡುವುದರಲ್ಲೇ ಬದುಕಿನ ಸಾರ್ಥಕತೆಯನ್ನು ಕಂಡವರು ಅಬ್ದುಲ್ ಖಾದರ್ ಹಾಜಿ.

ಮರಣದ ಬಳಿಕವೂ ಮುಂದುವರಿದ ಸೇವಾ ಪರಂಪರೆ

ಅವರು ಬದುಕಿದ್ದಾಗ ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ತಮ್ಮ ಸಂಪಾದನೆ, ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿದ್ದರು. ಇಂದು ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಸೇವಾ ಆಶಯವನ್ನು ಅವರ ಕುಟುಂಬ ಮುಂದುವರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಸಂಗತಿ. ಅವರ ಸೇವಾ ಮನೋಭಾವ ಮತ್ತು ಸಮಾಜದ ಮೇಲಿನ ಕಾಳಜಿಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಸಂಕಲ್ಪದೊಂದಿಗೆ, ಅವರ ಕುಟುಂಬದವರು ಅವರ ಹೆಸರಿನಲ್ಲಿ ಗಾಂಧಿನಗರ ಮದರಸಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಾಶ್ವತವಾದ ಡಿಜಿಟಲ್ ಕ್ಲಾಸ್‌ರೂಮ್‌ನ್ನು ದಾನವಾಗಿ ನೀಡಿದ್ದಾರೆ.
ಇದು ಕೇವಲ ಒಂದು ಕೊಡುಗೆಯಲ್ಲ. ಅಬ್ದುಲ್ ಖಾದರ್ ಹಾಜಿಯವರು ಬದುಕಿದ್ದಾಗ ಬೆಳೆಸಿಕೊಂಡಿದ್ದ ಸಮಾಜಮುಖಿ ಚಿಂತನೆ, ಶಿಕ್ಷಣದ ಮೇಲಿನ ಕಾಳಜಿ ಮತ್ತು ಸೇವಾ ಪರಂಪರೆಗೆ ನೀಡಿರುವ ಶಾಶ್ವತ ರೂಪವಾಗಿದೆ. ಅವರು ತಮ್ಮ ಬದುಕಿನಲ್ಲಿ ಸಂಪಾದಿಸಿದ ಸಂಪತ್ತಿನ ಒಂದು ಭಾಗವನ್ನು ಸಮಾಜಕ್ಕಾಗಿ ಬಳಸಿದರು. ಇಂದು ಅವರ ಕುಟುಂಬ ಅದೇ ಆಶಯವನ್ನು ಮುಂದುವರಿಸುತ್ತಿದೆ. ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಡಿಜಿಟಲ್ ಕ್ಲಾಸ್‌ರೂಮ್ ಅನೇಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಅವರ ಅಗಲಿಕೆಯ ನಂತರವೂ ಅವರ ಸತ್ಕಾರ್ಯಗಳು ಹೊಸ ಪೀಳಿಗೆಯ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಮುಂದುವರಿಯಲಿವೆ.
ಒಬ್ಬ ವ್ಯಕ್ತಿ ಅಗಲಿದರೂ, ಅವರು ಸಮಾಜಕ್ಕಾಗಿ ಬಿತ್ತಿದ ಸೇವೆಯ ಬೀಜಗಳು ಮುಂದಿನ ಪೀಳಿಗೆಗಳಲ್ಲೂ ಫಲ ನೀಡುತ್ತಲೇ ಇರುತ್ತವೆ. ಒಬ್ಬ ಮನುಷ್ಯನ ಬದುಕಿಗೆ ನಿಜವಾದ ಅರ್ಥ ನೀಡುವುದು ಅವನು ಸಂಪಾದಿಸಿದ ಸಂಪತ್ತು ಅಲ್ಲ; ಅವನು ಸಮಾಜಕ್ಕೆ ಬಿಟ್ಟುಹೋಗುವ ಸೇವೆ, ಮಾನವೀಯತೆ ಮತ್ತು ಸತ್ಕಾರ್ಯಗಳೇ.
ಮರಣದ ನಂತರವೂ ಒಬ್ಬರ ಸತ್ಕಾರ್ಯಗಳು ಮುಂದುವರಿದರೆ, ಅವರ ಆಶಯಗಳು ಜೀವಂತವಾಗಿದ್ದರೆ, ಅವರ ಹೆಸರಿನಲ್ಲಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳು ನಡೆಯುತ್ತಿದ್ದರೆ—ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೇನು? ಅಬ್ದುಲ್ ಖಾದರ್ ಹಾಜಿಯವರ ಬದುಕು ಮತ್ತು ಸೇವಾ ಪರಂಪರೆ ಇದಕ್ಕೆ ಜೀವಂತ ಉದಾಹರಣೆ.
ಅವರು ಇಲ್ಲದಿದ್ದರೂ ಅವರ ಸೇವೆಯ ದಾರಿ ಮುಂದುವರಿಯುತ್ತಿದೆ. ಅವರ ಕೈಗಳು ನಿಂತಿದ್ದರೂ, ಅವರ ಕುಟುಂಬದ ಮೂಲಕ ಸಮಾಜ ಸೇವೆಯ ಕಾರ್ಯ ಮುಂದುವರಿಯುತ್ತಿದೆ. ಅವರ ಬದುಕಿನ ಆಶಯಗಳು ಹೊಸ ಪೀಳಿಗೆಯ ಭವಿಷ್ಯಕ್ಕೆ ಬೆಳಕಾಗುತ್ತಿವೆ.
ಇದೆಲ್ಲವೂ ಸೃಷ್ಟಿಕರ್ತನ ನಿಶ್ಚಯವಲ್ಲವೇ…?

✍🏻 ಬರಹ : ರಶೀದ್ ಜಟ್ಟಿಪಳ್ಳ 

m

Related Posts