ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಮುಖಂಡರು
ಕೂಡಲೇ ಎರಡೂ ಕಟ್ಟಡವನ್ನು ತೆರವುಗೊಳಿಸಲು ರಾಧಾಕೃಷ್ಣ ಬೊಳ್ಳೂರು ಅಧಿಕಾರಿಗಳಿಗೆ ಆಗ್ರಹ
ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಗೆ ಬರೆ ಜರಿದು ತರಗತಿ ಕೊಠಡಿಗೆ ಹಾನಿಯಾಗಿರುವ ವಿಚಾರ ತಿಳಿದು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮತ್ತು ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ತೆರಳಿ ಸ್ಥಳ ವೀಕ್ಷಣೆ ಮಾಡಿದರು. ಕಟ್ಟಡದ ಬದಿಯಲ್ಲಿ ಕಡಿದಾದ ಬರೆ ಇದ್ದು ಕಳೆದ ವಾರ ಸುರಿದ ಭಾರಿ ಮಳೆಗೆ ತರಗತಿ ಕೊಠಡಿಯ ಬದಿಗೆ ಜರಿದು ಬಿದ್ದಿದೆ. ಕಟ್ಟಡದ ಚಾವಣಿ ಮೇಲೆ ಮರದ ಗೆಲ್ಲು ಮುರಿದು ಬಿದ್ದಿದೆ. ಇದನ್ನು ವೀಕ್ಷಿಸಿದ ರಾಧಾಕೃಷ್ಣ ಬೊಳ್ಳೂರು ರವರು ಮುಖ್ಯೋಪಾಧ್ಯಯರ ಬಳಿ ವಿಚಾರಿಸಿ, ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಕರೆದರು. ಸ್ಥಳಕ್ಕೆ ಬಂದ ಶಿಕ್ಷಣಾಧಿಕಾರಿಗಳಲ್ಲಿ ಕಟ್ಟಡದ ಪರಿಸ್ಥಿತಿ ಮತ್ತು ಅದರಿಂದಾಗುವ ಅಪಾಯವನ್ನು ವಿವರಿಸಿ ಕೂಡಲೇ ಕಟ್ಟಡವನ್ನು ಮತ್ತು ಹಳೆಯ ಬಯಲು ರಂಗ ಮಂದಿರವನ್ನು ಮುರಿದು ತೆರವು ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದೇ ಕಟ್ಟಡದ ಸಮೀಪದಲ್ಲಿ ಎಂ ಆರ್ ಪಿ ಎಲ್ ಪ್ರಾಯೋಜಿತ ಶೌಚಾಲಯ ನಿರ್ಮಾಣವಾಗುತ್ತಿದ್ದು ಅದೂ ಸಹ ದೊಡ್ಡ ಪ್ರಪಾತದಂತಿರುವ ಬರೆಯ ಬದಿಯಲ್ಲಿದೆ. ಈ ಕಟ್ಟಡವೂ ಸಹ ಕಳಪೆಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿದೆ ಇದನ್ನು ಉಪಯೋಗಿಸಲು ಅಸಾಧ್ಯ. ಆದುದರಿಂದ ಶೌಚಾಲಯ ಕಟ್ಟಡವನ್ನು ಸಹ ಮುರಿದು ತೆರವು ಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳ ಪರಿಶೀಲನೆ ಮಾಡಿ ತೆರವು ಗೊಳಿಸಲು ವರದಿ ನೀಡುವಂತೆ ಸೂಚನೆ ನೀಡಿದರು.

ಇದೆ ಶಾಲೆಯ ಬಳಿ ಮೆಸ್ಕಾಂ 33 ಕೆವಿ ವಿದ್ಯುತ್ ಲೈನ್ ಇದ್ದು 3 ಮರಗಳು ಲೈನ್ ಗೆ ತಾಗಿಕೊಂಡಿದ್ದು ಅದನ್ನು ಸಹ ತೆರವು ಗೊಳಿಸುವಂತೆ ರಾಧಾಕೃಷ್ಣ ಬೊಳ್ಳೂರು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವಿಜಯ ಕುಮಾರ್ ಆಲೆಟ್ಟಿ, ವಿಷ್ಣುಪ್ರಸಾದ್ ಕೆದಿಲಾಯ ಉಪಸ್ಥಿತರಿದ್ದರು.




m
