Featured, ಅಂಕಣ, ಸ್ಥಳೀಯ

ಆಟಿ ಬಂತು ಆಟಿ

ಆಟಿ ಅಥವಾ ಆಷಾಢ ಮಾಸ ಬಂತೆಂದರೆ ಸಾಕು ವಿವಿಧ ರೀತಿಯ ಆಚರಣೆಗಳು, ನಂಬಿಕೆಗಳು,ಬಗೆ ಬಗೆಯ ತಿನಿಸುಗಳು,ಆಹಾರ ಪದ್ಧತಿಗಳು ಇದನ್ನೆಲ್ಲ ನೋಡುವುದೇ ಕಣ್ಣಿಗೊಂದು ಹಬ್ಬ.ಅದರಲ್ಲೂ ವಿಶೇಷವಾಗಿ ನಮ್ಮ ತುಳುನಾಡಿನಲ್ಲಿ ಆಟಿ ಬಂತೆಂದರೆ ಸಾಕು ವಿಶಿಷ್ಟ ಆಚರಣೆಗಳು ಈ ರೀತಿಯ ಆಚರಣೆಗಳು ಹೆಚ್ಚಾಗಿ ಆಟಿ ತಿಂಗಳಲ್ಲಿ ಮಾತ್ರ ಕಾಣಲು ಸಾಧ್ಯ. ಉದಾಹರಣೆಗೆ: ಆಟಿ ಅಮಾವಾಸ್ಯೆ, ಆಟಿ ಕಳಂಜ,ಪಾಲೆ ಮರದ ಕೆತ್ತೆ ಕಷಾಯ ಇತ್ಯಾದಿ.ಇದೆಲ್ಲಾ ನಮ್ಮ ಹಿರಿಯರು ಸುಮ್ಮನೆ ತಂದ ಆಚರಣೆಗಳಲ್ಲ ಬದಲಾಗಿ ಇದರ ಹಿಂದೆ ಅನೇಕ ವೈಜ್ಞಾನಿಕ ಹಿನ್ನೆಲೆಗಳಿವೆ.

ನಮ್ಮ ತುಳುನಾಡಿನಲ್ಲಿ ಆಟಿ ತಿಂಗಳಿಗೆ ತನ್ನದೇ ಆದ ವಿಶೇಷತೆ ಇದೆ. ಸಾಮಾನ್ಯವಾಗಿ ಹಿಂದೆ ಈ ಆಟಿ ತಿಂಗಳನ್ನು ಅನಿಷ್ಟ ತಿಂಗಳೆಂದು ಪರಿಗಣಿಸಿದ್ದರು ಕಾರಣ ವಿಪರೀತ ಮಳೆ ಜೊತೆಗೆ ರೋಗ ರುಜಿನಗಳ ಹಾವಳಿ ಬೇರೆ ಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಜನಕ್ಕೆ ಹೊರಗೆ ಹೋಗಿ ದುಡಿಯಲು ಸಾಧ್ಯವಿಲ್ಲದ ಸ್ಥಿತಿ.ಅದೇನೇ ಇರಲಿ ಆಗಲೇ ಹೇಳಿದಂತೆ ನಮ್ಮ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಅನೇಕ ವಿಶಿಷ್ಟ ಆಚರಣೆಗಳಿವೆ ಅದರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಆಟಿ ಅಮಾವಾಸ್ಯೆ:-ಈ ಆಟಿ ಅಮಾವಾಸ್ಯೆಯಂದು ಪಾಲೆ ಮರದ ಕೆತ್ತೆಯ ಕಷಾಯ ಮಾಡಿ ಕುಡಿಯುವ ಸಂಪ್ರದಾಯವಿದೆ. ಹಾಗಾದರೆ ಯಾಕೆ ಇದನ್ನು ಆಟಿ ಅಮಾವಾಸ್ಯೆಯ ದಿನವೇ ಕುಡಿಯಬೇಕು ಇದಕ್ಕೂ ಕೂಡ ವೈಜ್ಞಾನಿಕ ಕಾರಣಗಳಿವೆ. ಈ ಪಾಲೆ ಮರದ ಕೆತ್ತೆಯ ಕಷಾಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ಇದರಲ್ಲಿ ಅನೇಕ ಬಗೆಯ ಔಷಧೀಯ ಗುಣಗಳು ಇವೆ ಅದನ್ನು ಕೂಡ ಬೇಕಾ ಬಿಟ್ಟಿ ಕುಡಿಯುವಂತಿಲ್ಲ ಅದಕ್ಕೂ ಶಾಸ್ತ್ರ ಸಂಪ್ರದಾಯಗಳಿವೆ.ಈ ಮರ ಸುಮಾರು ಸಾವಿರದಷ್ಟು ಔಷಧೀಯ ಗುಣಗಳನ್ನು ಹೊಂದಿದೆ.ಈ ಮರದ ತೊಗಟೆಯಿಂದ ರಸವನ್ನು ತೆಗೆದು ಖಾಲಿ ಹೊಟ್ಟೆಗೆ ಕುಡಿಯುವ ಪದ್ದತಿ.ಆಟಿ ಅಮಾವಾಸ್ಯೆಯ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಕಷಾಯವನ್ನು ಕುಡಿಯುದರಿಂದ ಮುಂದಿನ ಆಷಾಢ ಮಾಸದ ವರೆಗೆ ಯಾವುದೇ ಖಾಯಿಲೆಗಳು ಬರುವುದಿಲ್ಲ ಹಾಗು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ಆಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ. ಇದು ಸಾವಿರಾರು ವರ್ಷಗಳಿಂದ ಹಿರಿಯರು ಅನುಸರಿಸಿಕೊಂಡು ಬಂದಂತಹ ಪದ್ದತಿ ಆಗಿದ್ದು ಈ ಮರಕ್ಕೆ ದೈವಿಕ ಸ್ಥಾನವಿದೆ. ಈ ಮರವು ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರ ಆಟಿ ಅಮಾವಾಸ್ಯೆಯಂದು ಈ ಮರ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಈ ಕಷಾಯವು ಕಹಿಯಾಗಿದ್ದರು ಕೂಡ ವರ್ಷಕ್ಕೆ ಬೇಕಾದ ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.ಇದನ್ನು ಸಪ್ತ ಪರ್ಣೀ ಮರ ಎಂದು ಕೂಡ ಕರೆಯುತ್ತಾರೆ.ಇದರ ಕಾಂಡದ ಹೊರ ಭಾಗ ಬಿಳಿ ಬಣ್ಣದಿಂದ ಹಾಗು ಒಳ ಭಾಗ ಹಳದಿ ಬಣ್ಣದಿಂದ ಕೂಡಿರುತ್ತದೆ ಹಾಗು ಇದರ ಹೂವು ಹಸಿರು ಬಣ್ಣದಿಂದ ಕೂಡಿರುತ್ತದೆ. ಹಿಂದಿನ ಕಾಲದಲ್ಲಿ ಈ ಮರವನ್ನು ಬರೆಯುವ ಉಪಕರಣವಾಗಿ ಉಪಯೊಗಿಸುತ್ತಿದ್ದರು.ಇದನ್ನು ತರುವವರು ಅಮಾವಾಸ್ಯೆಯ ಹಿಂದಿನ ದಿನ ಕಾಡಿಗೆ ತೆರಳಿ ಮರವನ್ನು ಗುರುತು ಹಿಡಿದು ಆ ಮರಕ್ಕೊಂದು ಗುರುತು ಹಾಕಿ ಬರುತ್ತಾರೆ.ಅಮವಾಸ್ಯೆಯ ದಿನ ಸೂರ್ಯೋದಯಕ್ಕೂ ಮುನ್ನವೇ ಬರಿ ಮೈಯಲ್ಲಿ ಹೋಗಿ ತೊಗಟೆಯನ್ನು ತರುವ ಸಂಪ್ರದಾಯವಿದೆ.ಕಲ್ಲಿನಿಂದಲೇ ಈ ತೊಗಟೆಯನ್ನು ತೆಗೆಯುವಂತದ್ದು ಇದಕ್ಕೆ ಕಾರಣ ಕತ್ತಿಯಂತಹ ಲೋಹದ ವಸ್ತುಗಳನ್ನು ಉಪಯೋಗಿಸಿದರೆ ಔಷಧೀಯ ಗುಣಗಳು ಕಡಿಮೆ ಆಗುತ್ತವೆ ಎಂದು.

ತುಳುನಾಡಿನ ಇನ್ನೊಂದು ಪ್ರಮುಖ ವೈಶಿಷ್ಟ್ಯತೆ ಎಂದರೆ ಆಟಿ ಕಳಂಜ.ಆಟಿ ತಿಂಗಳಿನಲ್ಲಿ ಆಟಿ ಕಳಂಜನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ.ಇದು ತುಳುನಾಡಿನ ಸಾಂಪ್ರದಾಯಿಕ ಆಚರಣೆ ಆಗಿದ್ದು ಇದು ಮನೆಗೆ ಅಂಟಿದ ಮಾರಿಯನ್ನು ಓಡಿಸಿ ರೋಗ ರುಜಿನಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಇದೆ.ಇನ್ನು ಇದರ ವೇಷ ಭೂಷಣಗಳು ಭಿನ್ನವಾಗಿದ್ದು ಮನೆಯಲ್ಲೇ ಬಣ್ಣ ಹಚ್ಚಿಕೊಂಡು ವೇಷ ಭೂಷಣಗಳನ್ನು ಮನೆಯಲ್ಲೇ ಸಿದ್ದಮಾಡುತ್ತಾರೆ ಹಾಗು ಕಳಂಜನ ಅಲಂಕಾರಕ್ಕೆ ತೆಂಗಿನ ಗರಿ, ಅಡಿಕೆ ಮರದ ಹಾಳೆ,ಕೇಪುಳ ಹೂವು ಮುಂತಾದವನ್ನು ಉಪಯೋಗಿಸುತ್ತಾರೆ.ಹೀಗೆ ವೇಷ ತೊಟ್ಟು ಪಾಡ್ದನಕ್ಕೆ ಹೆಜ್ಜೆ ಹಾಕಿ ಮಾರಿಯನ್ನು ದೂರ ಮಾಡುವ ಕಳಂಜನಿಗೆ ದಕ್ಷಿಣೆಯ ರೂಪದಲ್ಲಿ ಹಲಸಿನ ಬೀಜ,ಸಾಂತಾಣಿ, ಉಪ್ಪು, ಹುಳಿ,ಮೆಣಸು ಅರಿಶಿಣ,ಹಣ ಹಾಗು ತೆಂಗಿನಕಾಯಿಯನ್ನು ಒಂದು ಗೊರಸೆಯಲ್ಲಿ ಇಟ್ಟು ಕಳಂಜನಿಗೆ ದಕ್ಷಿಣೆಯಾಗಿ ನೀಡುವ ಪದ್ದತಿ.

ಇನ್ನು ಆಟಿ ತಿಂಗಳ ಇನ್ನೊಂದು ವಿಶೇಷತೆ ಎಂದರೆ ಆಟಿ ಹದಿನೆಂಟರಂದು ಮಾಡುವ ಆಟಿ ಪಾಯಸ ಇದನ್ನು ಆಟಿ ಹದಿನೆಂಟಕ್ಕೇ ಏಕೆ ಮಾಡಬೇಕೆಂದರೆ ಅದರಲ್ಲಿ ಹದಿನೆಂಟು ಬಗೆಯ ಔಷಧೀಯ ಗುಣಗಳು ಇರುತ್ತವೆ.ಹಾಗು ಇದನ್ನು ಸೇವಿಸುವುದರಿಂದ ಅನೇಕ ಉಪಯೋಗಗಳಿವೆ ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮಳೆಗಾಲದಲ್ಲಿ ಬರುವ ವಿವಿಧ ರೋಗ ರುಜಿನಗಳನ್ನು ತಡೆಯುತ್ತದೆ,ಮಳೆ ಗಾಲದಲ್ಲಿ ಬರುವ ಶೀತ ಕೆಮ್ಮು ದೂರವಾಗುತ್ತದೆ, ಆಟಿ ಪಾಯಸದ ಪೋಷಕಾಂಶಗಳು ದೇಹವನ್ನು ಬಲ ಪಡಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಅಧ್ಯಯನಗಳ ಪ್ರಕಾರ ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಟಿ ತಿಂಗಳ ಇನ್ನೊಂದು ವಿಶೇಷತೆ ಏನೆಂದರೆ ಆಟಿ ತಿಂಗಳ ವಿವಿಧ ತಿನಿಸುಗಳು ಈ ಆಟಿ ತಿಂಗಳಿನಲ್ಲಿ ಆಹಾರ ತಯಾರಿಕೆಯಲ್ಲಿ ಅನೇಕ ಔಷಧೀಯ ಸಸ್ಯಗಳನ್ನು ಬಳಸುತ್ತಾರೆ ಉದಾಹರಣೆಗೆ:-ಬಿದಿರಿನ ಕಣಿಲೆ, ಕೆಸುವಿನೆಲೆಯ ಪತ್ರೊಡೆ ಇದರಿಂದೆಲ್ಲ ಅನೇಕ ರುಚಿಕರವಾದ ತಿನಿಸುಗಳನ್ನು ತಯಾರಿಸುತ್ತಾರೆ ನೆನೆದರೆ ಬಾಯಲ್ಲಿ ನೀರೂರಿಸುವಂತಾಗುತ್ತದೆ.ಇನ್ನೂ ಅನೇಕ ಪದಾರ್ಥಗಳು ಆಟಿ ತಿಂಗಳಿನಲ್ಲಿ ಸಿಗುತ್ತದೆ ಉದಾಹರಣೆಗೆ ಹಲಸಿನ ಹಣ್ಣು, ಅಣಬೆ ಇತ್ಯಾದಿ.

ಇನ್ನು ಈ ಆಟಿ ತಿಂಗಳಿನಲ್ಲಿ ಇನ್ನೂ ಅನೇಕ ನಂಬಿಕೆಗಳಿವೆ.ಈ ತಿಂಗಳನ್ನು ಸತ್ತವರ ತಿಂಗಳೆಂದು ಕೂಡ ಕರೆಯುತ್ತಾರೆ. ಹಾಗೆ ಆಟಿ ಅಮಾವಾಸ್ಯೆಯಂದು ಸತ್ತವರಿಗೆ ಅಗೆಲ್ ಬಳಸುವ ಕ್ರಮವು ಕೂಡ ಇದೆ.ಹಾಗು ಮದುವೆ ಆದ ನವ ದಂಪತಿಗಳು ತಮ್ಮ ಹಿರಿಯರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗುವ ಸಂಪ್ರದಾಯವಿದೆ. ಈ ಆಟಿ ತಿಂಗಳಿನಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಒಟ್ಟಿನಲ್ಲಿ ಈ ಆಟಿ ತಿಂಗಳು ಅಥವಾ ಆಷಾಢ ಮಾಸ ತುಳುನಾಡಿನ ಒಂದು ವಿಶಿಷ್ಟ ತಿಂಗಳಾಗಿದ್ದು ಈ ತಿಂಗಳ ಆಚರಣೆಗಳು ಮತ್ತು ನಂಬಿಕೆಗಳು ಇಂದಿಗೂ ಜನಪ್ರಿಯವಾಗಿವೆ.

ಬರಹ: ಪ್ರಾಪ್ತಿ ಗೌಡ

m

Related Posts