ಸಮಸ್ತ ಶತಮಾನೋತ್ಸವದ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ರಾಜ್ಯ ಸಮಿತಿ ಸಾಧಕ ಮುಅಲ್ಲಿಮರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಮುಅಲ್ಲಿಂ ಪ್ರಶಸ್ತಿಗೆ ಸುಳ್ಯ ರೇಂಜಿನ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಮುಅಲ್ಲಿಂ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಅಕ್ಟೋಬರ್ 14 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್‌ಜೆಎಂ ಕೇಂದ್ರ ಸಮಿತಿ ಅಧ್ಯಕ್ಷರಾದ ಅಮೀನು ಶ್‌ರೀಅಃ ಅಸ್ಸೆಯ್ಯದ್ ಅಲೀ ಬಾಫಖಿ ತಂಜಳ್ ರವರು ಪ್ರದಾನ ಮಾಡುವರು.
ಉಸ್ತಾದ್ ಲತೀಫ್ ಸಖಾಫಿ ರವರು ಒಂದೇ ಮದ್ರಸದಲ್ಲಿ ದೀರ್ಘಕಾಲದಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಕೇಂದ್ರ ಸಮಿತಿಯಿಂದ ಆಯೋಜಿಸಲಾದ ಅನೇಕ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪ್ರಮಾಣಪತ್ರ ಗಳಿಸಿದ್ದಾರೆ. ಹದಿನೈದು ವರ್ಷಗಳ ಹಿಂದೆಯೇ ರಾಜ್ಯ ಮುಅಲ್ಲಿಂ ಸರ್ವಿಸ್ ಕಾರ್ಡ್ ಪಡೆದು, ವಿವಿಧ ರಾಜ್ಯಮಟ್ಟದ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅಧ್ಯಾಪಕ ಒಕ್ಕೂಟದಲ್ಲಿ ಸಕ್ರಿಯ ಸದಸ್ಯರಾಗಿರುವುದು ಹಾಗೂ ಮಾದರಿಯ ಸೇವಾ ಮನೋಭಾವದಿಂದಾಗಿ ಈ ಗೌರವಾರ್ಹ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪೆರಾಜೆಯ ಮುಹಿಯ್ಯದ್ದೀನ್ ಜುಮಾ ಮಸೀದಿಯ ದರ್ಸಿನಲ್ಲಿ ವಿಧ್ಯಾಭ್ಯಾಸ ಮಾಡಿ ಅಲ್ಲಿಯ ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ನಾಲ್ಕು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ, ಕಲ್ಲಿಕೋಟೆಯ ಮರ್ಕಝ್‌ನಲ್ಲಿ ಉನ್ನತ ವ್ಯಾಸಂಗ ಮಾಡಿ ಸಖಾಫಿ ಬಿರುದು ಪಡೆದರು. ಅಲ್ಲಿಂದ ನೇರವಾಗಿ ಸುಳ್ಯ ಗಾಂಧಿನಗರದ ಮುನವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ನಿರಂತರವಾಗಿ 18 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




m
