ಪುತ್ತೂರು: ಇಲ್ಲಿನ ರಾಜಕೀಯ ವಲಯದಲ್ಲಿ ಕೆಲವು ದಿನಗಳಿಂದ ಗೋಚರಿಸುತ್ತಿರುವ ಶೀತಲ ಸಮರ ಇದೀಗ ತಾಪಮಾನ ಏರಿಸಿಕೊಂಡಿದ್ದು, ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮಧ್ಯೆಯ ಉದ್ವಿಗ್ನತೆ ಹೊಸ ತಿರುವು ಪಡೆದಿದೆ. ಈ ರಾಜಕೀಯ ಉದ್ವಿಗ್ನತೆ ಧಾರ್ಮಿಕ ವೇದಿಕೆಯವರೆಗೆ ನುಗ್ಗಿ, ಸ್ಥಳೀಯ ರಾಜಕಾರಣದಲ್ಲಿ ಭಾರೀ ಚರ್ಚೆಯ ವಿಷಯವಾಗುವಂತಹ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಕುಟುಂಬ ಸಮೇತ ನಗರದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ವೇಳೆ, ಪುತ್ತಿಲ ಪರಿವಾರದ ಕಾರ್ಯಕರ್ತರು ಗೇಟ್ ಬಳಿಯೇ ಅವರನ್ನು ತಡೆದು ಕಾರ್ಯಕ್ರಮ ಸ್ಥಳದಿಂದ ಹೊರದಬ್ಬಿದ ಘಟನೆ ರಾಜಕೀಯ ದ್ವೇಷದ ಚರ್ಚೆಗೆ ಕಾರಣವಾಗಿದೆ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿತ ಅತಿಥಿಗೆ ಕುಟುಂಬದವರ ಮುಂದೆ ಸಂಭವಿಸಿದ ಈ ಅವಮಾನ ಜನತೆಯ ಮುಂದೆ ಭಾವನಾತ್ಮಕ ಅಲೆ ಸೃಷ್ಟಿಯಾಗಿದೆ ರಾಜಕೀಯ ದ್ವೇಷವನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ತೀರಿಸುವುದು ಸಂಸ್ಕೃತಿಗೆ ಅವಹೇಳನ ಮಾಡುವಂತಾಗಿದೆ. ಕಳೆದ ಕೆಲವು ಸಮಯದಿಂದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಬಿಜೆಪಿ ಸೇರಿದ ಬಳಿಕ, ಪುತ್ತಿಲ ಪರಿವಾರದವರು ನನ್ನ ಮೇಲೆ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಪುತ್ತಿಲ ಪರಿವಾರದಲ್ಲಿದ್ದಾಗಲೂ ಮತ್ತು ಈಗ ಬಿಜೆಪಿ ಜವಾಬ್ದಾರಿ ಹೊತ್ತಾಗಲೂ ನಾನು ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಕೆಲಸ ಮಾಡಿದ್ದೇನೆ. ಆದರೆ ಕೇವಲ ದ್ವೇಷಕ್ಕಾಗಿ ದೇವರ ಕಾರ್ಯಕ್ರಮದಲ್ಲಿ ನನ್ನೊಬ್ಬನನ್ನೇ ಗುರಿಯಾಗಿಸಿ ಅವಮಾನಿಸಿರುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದರು.

ಘಟನೆಯಿಂದ ತೀವ್ರ ನೊಂದ ಮಾರ್ತ ಅವರು ನೇರವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ನಡೆಯಲ್ಲಿ ಕಣ್ಣೀರಿಟ್ಟರು. “ನನ್ನ ಪತ್ನಿಗೂ ಈ ಘಟನೆಯಿಂದ ತೀವ್ರ ನೋವಾಗಿದೆ. ಅವಮಾನ ಮಾಡಿದ ವ್ಯಕ್ತಿಗೆ ಸಂಸಾರವಿದ್ದು, ಆತನಿಗೆ ದೇವರು ಶಿಕ್ಷೆ ನೀಡುವುದು ಬೇಡ, ಬದಲಾಗಿ ಒಳ್ಳೆಯ ಬುದ್ಧಿಯನ್ನು ಕೊಡಲಿ. ಯಾರದ್ದೋ ಪ್ರೇರಣೆಯಿಂದ ಆತ ಹೀಗೆ ವರ್ತಿಸಿದ್ದಾನೆ,” ಎಂದು ಪ್ರಾರ್ಥಿಸಿರುವುದಾಗಿ ಮಾರ್ತ ತಿಳಿಸಿದರು.
