Featured, ಇತರೆ, ಸ್ಥಳೀಯ

ಕನ್ನಡ ಶಾಲೆ ಉಳಿಸಿ ಬೆಳೆಸಿ’ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ಆಯ್ಕೆ

ಸುಳ್ಯ: ನಾಡು–ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣದ ಉದ್ದೇಶದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಶಾಲೆ ಉಳಿಸಿ–ಬೆಳೆಸಿ’ ಅಭಿಯಾನದ ಸುಳ್ಯ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ಅವರನ್ನು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಆಯ್ಕೆ ಮಾಡಲಾಗಿದೆ

ಸುಳ್ಯ ತಾಲೂಕಿನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಸೈನಾರ್ ಜಯನಗರ ಅವರು ಪ್ರಸ್ತುತ ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದರ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಹಸೈನಾರ್ ಜಯನಗರ ಅವರ ಅನುಭವಯುತ ನಾಯಕತ್ವವು ತಾಲೂಕಿನಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹಾಗೂ ‘ಕನ್ನಡ ಶಾಲೆ ಉಳಿಸಿ–ಬೆಳೆಸಿ’ ಸಂಘಟನೆಯ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಹಸೈನಾರ್ ಅವರ ಈ ಮಹತ್ವದ ಆಯ್ಕೆಗೆ ತಾಲೂಕಿನ ವಿವಿಧ ಗಣ್ಯರು, ಕನ್ನಡಾಭಿಮಾನಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲಿನ ಅವರ ಅಪಾರ ನಿಷ್ಠೆ ಮತ್ತು ಸೇವಾ ಮನೋಭಾವಕ್ಕೆ ಈ ಆಯ್ಕೆ ಸೂಕ್ತ ಗೌರವವೆಂದು ಪ್ರಶಂಸಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ಅಭಿಯಾನದಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಪ್ರೀತಿ, ಓದು–ಬರವಣಿಗೆಯ ಆಸಕ್ತಿ ಹಾಗೂ ಭಾಷಾ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಭಾಷೆ ನಮ್ಮ ಅಸ್ತಿತ್ವ, ಸಾಹಿತ್ಯ ನಮ್ಮ ಸಂಸ್ಕೃತಿ ಎಂಬ ಸಂದೇಶವನ್ನು ಮಕ್ಕಳ ಮನದಲ್ಲಿ ಬೇರೂರಿಸುವ ಈ ಪ್ರಯತ್ನವು ಕನ್ನಡದ ಭವಿಷ್ಯಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ

ಜವಾಬ್ದಾರಿಯ ಬಗ್ಗೆ ಹಸೈನಾರ್ ಜಯನಗರ ರ ಮಾತು 

ತಮ್ಮ ನೂತನ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯಿಸಿದ ಹಸೈನಾರ್ ಜಯನಗರ, “ಕನ್ನಡ ಶಾಲೆಗಳು ನಮ್ಮ ನಾಡಿನ ಸಂಸ್ಕೃತಿ, ಭಾಷೆ ಮತ್ತು ಮೌಲ್ಯಗಳ ತಾಯಿಬೇರು. ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಮೂಲಸೌಕರ್ಯಗಳ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ದಾಖಲಾತಿ ಹೆಚ್ಚಿಸುವುದು ನಮ್ಮ ಮೊದಲ ಆದ್ಯತೆ. ಶಿಕ್ಷಕರು, ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಮಸ್ತ ಸಾರ್ವಜನಿಕರ ಸಹಕಾರದೊಂದಿಗೆ ‘ಕನ್ನಡ ಶಾಲೆ ಉಳಿಸಿ–ಬೆಳೆಸಿ’ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲಾಗುವುದು” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ನಾಡು–ನುಡಿಯ ಗೌರವವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ದೃಢವಾದ ಶಿಕ್ಷಣದ ಭವಿಷ್ಯ ನಿರ್ಮಿಸುವ ಸಂಕಲ್ಪದೊಂದಿಗೆ ಈ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಅವರು ಸ್ಪಷ್ಟಪಡಿಸಿದರು.

Related Posts