ಬೆಂಗಳೂರು: ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಆಯುಕ್ತಾಲಯದ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಪಾಶಿ ಅವರನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನಗರ ಯೋಜನಾ ಪ್ರಾಧಿಕಾರಗಳ ಪದಾಧಿಕಾರಿಗಳು ಭೇಟಿ ಮಾಡಿ ಶುಭಾಶಯ ಕೋರಿದರು.

ಈ ವೇಳೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಾಧಿಕಾರಗಳ ಒಕ್ಕೂಟದ ಸಂಚಾಲಕರಾದ ಕೆ. ಎಂ. ಮುಸ್ತಫ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಅವರು ಉಪಸ್ಥಿತರಿದ್ದರು.
ಭೇಟಿಯ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ನಗರ ಮತ್ತು ಗ್ರಾಮಾಂತರ ಯೋಜನೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು, ಅಭಿವೃದ್ಧಿ ಅಗತ್ಯಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ನೂತನ ಆಯುಕ್ತರೊಂದಿಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನಗರೀಕರಣದಿಂದ ಉಂಟಾಗುತ್ತಿರುವ ಸವಾಲುಗಳು ಮತ್ತು ಅವುಗಳಿಗೆ ಅಗತ್ಯವಿರುವ ಪರಿಹಾರ ಕ್ರಮಗಳ ಬಗ್ಗೆ ಗಮನ ಹರಿಸಲಾಯಿತು.
ನೂತನ ಆಯುಕ್ತ ಶಿವಾನಂದ ಕಪಾಶಿ ಅವರು ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿ, ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

