ಅರಣ್ಯ, ಪೋಲೀಸ್ ಹಾಗೂ ಅಗ್ನಿಶಾಮಕ ಇಲಾಖೆ ಹಾಗೂ ಸ್ಥಳೀಯರ ಸಹಕಾರ, ಸಮನ್ವಯದಿಂದ ಹಲವು ಗಂಟೆಗಳ ಕಾರ್ಯಾಚರಣೆ ಫಲಪ್ರದ
ಪೆರಾಜೆ, ಏಪ್ರಿಲ್ 13: ಪೆರಾಜೆ ಸಮೀಪದ ಪ್ರದೇಶದಲ್ಲಿ ಪಾಳು ಬಾವಿಗೆ ಬಿದ್ದಿದ್ದ ಆನೆಮರಿಯನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ರಕ್ಷಿಸುವ ಮೂಲಕ “ಆಪರೇಶನ್ ಗಜರಾಜ್” ಕಾರ್ಯಾಚರಣೆಯನ್ನು ಸಫಲಗೊಳಿಸಿದ್ದಾರೆ.
ಕಳೆದ ರಾತ್ರಿ ದಮಯಂತಿ ಎಂಬವರ ಜಾಗದಲ್ಲಿರುವ ಪಾಳು ಬಾವಿಗೆ ಆನೆಮರಿ ಬಿದ್ದಿದ್ದು, ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ತೀವ್ರಗೊಳಿಸಲಾಯಿತು.
ಆನೆಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತರುವ ಸಲುವಾಗಿ ಹಿಟಾಚಿ ಯಂತ್ರದ ಸಹಾಯದಿಂದ ಬಾವಿಯ ಒಂದು ಭಾಗವನ್ನು ಅಗಲಗೊಳಿಸಿ ದಾರಿ ಸಿದ್ಧಪಡಿಸಲಾಯಿತು. ಹಲವು ಗಂಟೆಗಳ ಶ್ರಮದ ಬಳಿಕ ಆನೆಮರಿಯನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್‌ಒ ಆಂಥೋನಿ ಎಸ್. ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಎಸಿಎಫ್‌ಗಳಾದ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್, ರೇಂಜರ್‌ಗಳಾದ ಕಿರಣ್ (ಪುತ್ತೂರು), ವಿಮಲ್ ಬಾಬು ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು. ಜೊತೆಗೆ ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳೂ ಸಹಕರಿಸಿದ್ದರು.
ರಕ್ಷಣೆಯ ನಂತರ ಆನೆಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಅದನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆ, ಪೋಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳ ಸಮನ್ವಯದ ತ್ವರಿತ ಕಾರ್ಯಾಚರಣೆಯಿಂದ ಆನೆಮರಿಯ ಪ್ರಾಣ ಉಳಿದಿರುವುದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.




m
