ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ಬೆಡಿ ಉತ್ಸವದ ವೇಳೆ ಸುಡುಮದ್ದಿನ ಅವಘಡ ಸಂಭವಿಸಿ ಹಲವರು ಗಾಯಗೊಂಡ ಘಟನೆ ವರದಿಯಾಗಿದೆ. ಘಟನೆ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಏಪ್ರಿಲ್ 17ರಂದು ರಾತ್ರಿ ಪುತ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸ್ನೇಹಿತರೊಂದಿಗೆ ಬಂದಿದ್ದ ಅವರು, ಜಾತ್ರೆಯ ಗದ್ದೆಯಲ್ಲಿ ಏರ್ಪಡಿಸಿದ್ದ ಸುಡುಮದ್ದು ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ವೇಳೆ ಅಕಸ್ಮಾತ್ ಬೆಂಕಿ ಹರಡಿ ಸುಟ್ಟ ಗಾಯಗಳಿಗೆ ಒಳಗಾದರು.
ಈ ಅವಘಡದಲ್ಲಿ ಸುಮಂತ್ ಶೆಟ್ಟಿ ಸೇರಿದಂತೆ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್ ಹಾಗೂ ಮೋಹನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ನೇಹಿತರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಡುಮದ್ದು ನಿರ್ವಹಣೆ ಮಾಡಿದವರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಸಂಬಂಧಿತ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 45/2026 ಅಡಿ BNS 2023ರ ಕಲಂ 288, 125(a), 3(5)ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




m
